5 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ: ನ್ಯಾಯಾಂಗ ತನಿಖೆಗೆ ಕೇಜ್ರಿವಾಲ್ ಆದೇಶ

ಹೊಸದಿಲ್ಲಿ, ಸೆ. 10: ಈಶಾನ್ಯ ದಿಲ್ಲಿಯ ಶಾಹ್‌ದಾರಾದ ಶಾಲೆಯ ತರಗತಿ ಕೊಠಡಿಯೊಂದರಲ್ಲಿ 5 ವರ್ಷದ ಬಾಲಕಿಗೆ ಶಾಲೆಯ ಜವಾನ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಶನಿವಾರ ನಡೆದಿದೆ. 40 ವರ್ಷದ ಜವಾನನ್ನು ಪೊಲೀಸರು ಬಂಧಿಸಿದ್ದಾರೆ.
ಈಶಾನ್ಯ ದಿಲ್ಲಿಯ ಗಾಂಧಿನಗರ ಶಾಹ್‌ದಾರಾದ ಠಾಗೂರ್ ಪಬ್ಲಿಕ್ ಶಾಲೆಯಲ್ಲಿ ಜವಾನ ವಿಕಾಸ್ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾನೆ. ಈ ಹಿಂದೆ ಆತ ಇದೇ ಶಾಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಮಧ್ಯಾಹ್ನ ಊಟದ ಡಬ್ಬಿಯನ್ನು ಟೀಚರ್‌ಗೆ ನೀಡಿ ಕಾರಿಡಾರ್‌ನಲ್ಲಿ ನಡೆದುಕೊಂಡು ಬರುತ್ತಿದ್ದ ಬಾಲಕಿಯನ್ನು ಖಾಲಿ ತರಗತಿ ಕೊಠಡಿಗೆ ಕರೆದೊಯ್ದ ವಿಕಾಸ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಬಾಲಕಿಗೆ ದೌರ್ಜನ್ಯ ಎಸಗಿದಿರುವುದನ್ನು ವಿಕಾಸ್ ನಿರಾಕರಿಸಿದ್ದಾನೆ.
ಬಾಲಕಿಗೆ ಕ್ಯಾಂಡಿಯ ಆಮಿಷವೊಡ್ಡಿ ಆಕೆಯನ್ನು ಖಾಲಿ ತರಗತಿ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್ ಉಪ ಅಧೀಕ್ಷಕ ನೂಪುರ್ ಪ್ರಸಾದ್ ಹೇಳಿದ್ದಾರೆ.
ನ್ಯಾಯಾಂಗ ತನಿಖೆಗೆ ಕೇಜ್ರಿವಾಲ್ ಆದೇಶ
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿ ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.







