ಪೊಲೀಸರಿಂದ ಅತಿರೇಕದ ಕ್ರಮ: ಬಿ.ಎ.ಮೊಹಿದಿನ್
'ವಾರ್ತಾಭಾರತಿ' ವರದಿಗಾರನ ಬಂಧನ

ಮಂಗಳೂರು, ಸೆ.10: ಬಂಟ್ವಾಳದ ವರದಿಗಾರನ ಮೇಲೆ ಎಫ್‌ಐಆರ್ ದಾಖಲಿಸಿ ಆತನ ಬಂಧನಕ್ಕೆ ಕಾರಣವಾಗುವ ಮೂಲಕ ಪೊಲೀಸರು ಅತಿರೇಕದ ಕ್ರಮ ಕೈಗೊಂಡಿದ್ದಾರೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿ ಬಿ.ಎ.ಮೊಹಿದಿನ್ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಮಾಧ್ಯಮ ರಂಗದ ಹಕ್ಕುಗಳನ್ನು ರಕ್ಷಣೆ ಮಾಡುವ ಸಂಪೂರ್ಣ ಹೊಣೆಗಾರಿಕೆ ಪೊಲೀಸರಿಗಿದೆ. ಅದರಲ್ಲಿ ಏನಾದರೂ ನ್ಯೂನತೆಗಳಾಗಿದ್ದರೆ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಲು ಅವಕಾಶವಿದೆ. ಪ್ರಜಾಪ್ರಭುತ್ವದಲ್ಲಿ ಬಹುತೇಕ ಪತ್ರಿಕೆಗಳು ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. 'ವಾರ್ತಾಭಾರತಿ'ಯೂ ರಾಜ್ಯದಲ್ಲಿ ಜವಾಬ್ದಾರಿಯುತ ಪತ್ರಿಕೆಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವುದನ್ನು ನಾನು ಗಮನಿಸಿದ್ದೇನೆ. ನಾನು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಕೋಮು ಪ್ರೇರಿತ ಗಲಭೆಗಳ ಸಂದರ್ಭದಲ್ಲಿ ಪೊಲೀಸರು ಅತಿರೇಕದಿಂದ ನಡೆದುಕೊಳ್ಳದಂತೆ ಸಾಕಷ್ಟು ಎಚ್ಚರವಹಿಸಿದ್ದೇನೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಚ್ಯುತಿ ಬರುವಂತೆ ಪೊಲೀಸರು ವರದಿಗಾರನ ಮೇಲೆ ಎಫ್‌ಐಆರ್ ದಾಖಲಿಸಿರುವ ಅತಿರೇಕದ ಕ್ರಮ ಸರಿಯಲ್ಲ. ಈ ಬಗ್ಗೆ ಸಂಬಂಧ ಪಟ್ಟವರು ಪತ್ರಕರ್ತರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿ.ಎ.ಮೊಹಿದಿನ್ ತಿಳಿಸಿದ್ದಾರೆ.





