ಫೇಕ್ ಬಾಬಾಗಳ ಪಟ್ಟಿ ಬಿಡುಗಡೆ ಮಾಡಿದ ಅಖಿಲ ಭಾರತೀಯ ಅಖಾರ ಪರಿಷತ್
ಈ ಕುಖ್ಯಾತ ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

ಹೊಸದಿಲ್ಲಿ, ಸೆ.10: ಹಿಂದೂ ಸಾಧುಗಳ ಸರ್ವೋಚ್ಛ ಮಂಡಳಿ ಅಖಿಲ ಭಾರತೀಯ ಅಖಾರ ಪರಿಷತ್ ದೇಶದಲ್ಲಿರುವ ನಕಲಿ ಬಾಬಾಗಳ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ. ಸ್ವಘೋಷಿತ ದೇವಮಾನವರ ಬಣ್ಣ ಬಯಲಾಗುತ್ತಿರುವ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಪರಿಷತ್ ಮುಂದಾಗಿದೆ ಎನ್ನಲಾಗಿದೆ.
ನಕಲಿ ಬಾಬಾಗಳ ಪಟ್ಟಿಯನ್ನು ಬಿಡುಗಡೆಗೊಳಿಸುವುದರ ಜೊತೆಗೆ ಅಖಿಲ ಭಾರತೀಯ ಅಖಾರ ಪರಿಷತ್ ಸಂತ ಪದವಿಯನ್ನು ನೀಡುವುದಕ್ಕಾಗಿ ವ್ಯವಸ್ಥೆಯೊಂದನ್ನು ಮಾಡಲು ನಿರ್ಧರಿಸಿದೆ.

ಅಸಾರಾಮ್ ಬಾಪು, ಸಂತ ರಾಮ್ ಪಾಲ್, ಗುರ್ಮೀತ್ ಸಿಂಗ್, ರಾಧೆ ಮಾ, ಸಚಿನಂದ್ ಗಿರಿ ಅಲಿಯಾಸ್ ಸಚಿನ್ ದತ್ತ, ಇಚ್ಚಾಧಾರಿ ಭೀಮಾನಂದ್, ಮಲ್ಖನ್ ಸಿಂಗ್, ನಾರಾಯಣ್ ಸಾಯಿ, ಆಚಾರ್ಯ ಕುಶ್ ಮುನಿ, ಸ್ವಾಮಿ ಅಸೀಮಾನಂದ, ಬೃಹಸ್ಪತಿ ಗಿರಿ, ಓಂ ನಮಃ ಶಿವಾಯ್ ಬಾಬಾ, ನಿರ್ಮಲ್ ಬಾಬಾ ಹಾಗೂ ಓಂ ಬಾಬಾ ಸೇರಿದಂತೆ ಈ ಪಟ್ಟಿಯಲ್ಲಿ 14 ಮಂದಿಯ ಹೆಸರಿದೆ.


“ಸಂತ ಹೆಸರನ್ನು ಹಲವರು ದುರ್ಬಳಕೆ ಮಾಡುತ್ತಿರುವುದು ಅಖಿಲ ಭಾರತೀಯ ಅಖಾರ ಪರಿಷತ್ ನ ಗಮನಕ್ಕೆ ಬಂದಿದೆ. ಆದ್ದರಿಂದ ಈ ಹೆಸರನ್ನು ನೀಡಲು ವ್ಯವಸ್ಥೆಯೊಂದನ್ನು ಮಾಡಲಾಗುವುದು” ಎಂದು ವಿಶ್ವ ಹಿಂದೂ ಪರಿಷತ್ ನ ನಾಯಕ ಸುರೇಂದ್ರ ಜೈನ್ ಹೇಳಿದ್ದಾರೆ.








