ಗೌರಿ ಬರಿಯ ಜೀವವಲ್ಲ, ಅವರೊಂದು ತತ್ವ: ಪ್ರೊ.ಜಯಪ್ರಕಾಶ ಶೆಟ್ಟಿ

ಕುಂದಾಪುರ, ಸೆ.10: ಪ್ರಗತಿಪರ ಚಿಂತಕಿ ಹಾಗೂ ಜನಪರ ಹೋರಾಟ ಗಾರ್ತಿ ಗೌರಿ ಲಂಕೇಶ್ ಬರಿಯ ಜೀವವಾಗಿರದೆ, ಅವರೊಂದು ತತ್ವ ಹಾಗೂ ಸಿದ್ಧಾಂತವಾಗಿದ್ದರು. ಈ ನಾಡಿನ ಜೀವಪರ ಮನಸ್ಸುಗಳಿಗೆ ಸ್ಪೂರ್ತಿ, ಪ್ರೇರಣೆ ಯಾಗಿದ್ದರು ಎಂದು ಉಪನ್ಯಾಸಕ ಪ್ರೊ.ಜಯಪ್ರಕಾಶ ಶೆಟ್ಟಿ ಹೇಳಿದ್ದಾರೆ.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಗೌರಿ ಲಂಕೇಶ್ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಗೌರಿ ಲಂಕೇಶ್ ಕೋಮುವಾದ ಮತ್ತು ಮೂಲಭೂತವಾದವನ್ನು ತನ್ನ ಜೀವನದ ಕೊನೆಯ ಉಸಿರಿರುವ ತನಕವೂ ವಿರೋಧಿಸಿದ್ದರು. ಗೌರಿ ಒಬ್ಬ ಮಾನವತಾವಾದಿ ಹಾಗೂ ತಾಯಿ ಹೃದಯದ ಮಹಿಳೆಯಾಗಿದ್ದರು. ಆಕೆಯ ಹತ್ಯೆ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದು ಅವರು ಟೀಕಿಸಿದರು.
ನಗರ ಪ್ರಾಧಿಕಾರದ ಅಧ್ಯಕ್ಷ ವಿಕಾಸ ಹೆಗ್ಡೆ, ಎಪಿಎಂಸಿ ಉಪಾಧ್ಯಕ್ಷ ಗಣೇಶ್ ಶೇರೆಗಾರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶಿವಾನಂದ ಕೆ., ಕೆಪಿಸಿಸಿ ಐಟಿ ಸೆಲ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಮಹಿಳಾ ಕಾಂಗ್ರೆಸ್‌ನ ಶೋಭಾ ಸಚ್ಚಿದಾನಂದ, ಇಂಟಕ್ ಅಧ್ಯಕ್ಷ ಲಕ್ಷಣ ಶೆಟ್ಟಿ, ಪುರಸಭಾ ಸದಸ್ಯರಾದ ಶ್ರೀಧರ ಶೇರೆಗಾರ್, ಚಂದ್ರ ಅಮೀನ್, ಉಮೇಶ್ ಬಿ., ಕೇಶವ ಭಟ್, ಮುಖಂಡ ರಾದ ಕೃಷ್ಣ, ವಿಠಲ ಕಾಂಚನ್, ಆನಂದ ಪೂಜಾರಿ, ಚಂದ್ರಕಾಂತ ಖಾರ್ವಿ, ಸುರೇಶ್, ಶಶಿಕಾಂತ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ನಗರ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ವಂದಿಸಿದರು.







