ಇತಿಹಾಸ ಸಂಶೋಧಕಿ, ಪುರಾತತ್ವ ಶಾಸ್ತ್ರಜ್ಞೆ: ‘ಅಫ್ಘಾನ್ ಅಜ್ಜಿ ’ ನ್ಯಾನ್ಸಿ ಹ್ಯಾಚ್ ನಿಧನ

ಕಾಬೂಲ್,ಸೆ.10: ಅಫ್ಘಾನ್ ಸಂಸ್ಕೃತಿಯ ಬಗ್ಗೆ ಅಪಾರವಾದ ಅಧ್ಯಯನ ನಡೆಸಿರುವ ಅಮೆರಿಕದ ಇತಿಹಾಸಗಾರ್ತಿ, ಶಿಕ್ಷಣತಜ್ಞೆ ಹಾಗೂ ಪುರಾತತ್ವ ಶಾಸ್ತ್ರಜ್ಞೆ ನ್ಯಾನ್ಸಿ ಹ್ಯಾಚ್ ಡ್ಯುಪ್ರಿ ರವಿವಾರ ಕಾಬುಲ್‌ನಲ್ಲಿ ನಿಧನರಾಗಿದ್ದಾರೆ.ಅವರಿಗೆ 89 ವರ್ಷ ವಯಸ್ಸಾಗಿತ್ತು. ‘ಅಫ್ಘಾನಿಸ್ತಾನದ ಅಜ್ಜಿಯೆಂದೇ ಖ್ಯಾತರಾದ ನ್ಯಾನ್ಸಿ ಹ್ಯಾಚ್ ಅವರು ತನ್ನ ಬದುಕಿನ ಐದು ದಶಕಗಳನ್ನು ಅಫ್ಘಾನ್ ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಧ್ಯಯನಕ್ಕೆ ಮುಡಿಪಾಗಿಟ್ಟಿದ್ದರು.
ಅಮೆರಿಕದ ರಾಜತಾಂತ್ರಿಕರೊಬ್ಬರ ಪತ್ನಿಯಾಗಿ ಡ್ಯುಪ್ರಿ 1962ರಲ್ಲಿ ಕಾಬೂಲ್‌ಗೆ ಆಗಮಿಸಿದ್ದರು. ಆದರೆ ಶೀಘ್ರವೇ ಅವರು ವಿಚ್ಛೇದನ ಪಡೆದು, ಪುರಾತತ್ವ ಶಾಸ್ತ್ರಜ್ಞ ಲೂಯಿಸ್ ಡ್ಯೂಪ್ರಿ ಅವರನ್ನು ವಿವಾಹವಾಗಿದ್ದರು.
ಈ ದಂಪತಿಯು ಸುಮಾರು 14 ವರ್ಷಗಳ ಕಾಲ ಅಫ್ಘಾನಿಸ್ತಾನದ ವಿವಿಧ ಪುರಾತತ್ವ ಸ್ಥಳಗಳಲ್ಲಿ ಉತ್ಖನನ ನಡೆಸಿದ್ದರು. ಅಫ್ಘಾನ್ ಇತಿಹಾಸವನ್ನು ದಾಖಲಿಸಿಕೊಂಡಿರುವ ಆಕೆ ಹಲವಾರು ಮಾರ್ಗದರ್ಶಿ ಪುಸ್ತಿಕೆಗಳನ್ನು ಬರೆದಿದ್ದಾರೆ.
ಡ್ಯುಪ್ರಿ ಅವರು ತನ್ನನ್ನೊಂದು ‘ಹಳೆಯ ಸ್ಮಾರಕ’ವೆಂದು ಬಣ್ಣಿಸಿಕೊಂಡಿದ್ದರು ಹಾಗೂ ಅನೇಕ ಅಫ್ಘನ್ನರು ಆಕೆಯನ್ನು ‘ಅಫ್ಘಾನಿಸ್ತಾನದ ಅಜ್ಜಿ ಎಂದೇ ಕರೆದಿದ್ದರು ಎಂದು ಕಾಬೂಲ್ ವಿವಿಯ ಅಫ್ಘಾನ್ ಕೇಂದ್ರದ ಕಾರ್ಯಕಾರಿ ನಿರ್ದೇಶಕ ವಾಹಿದ್ ವಾಫಾ ತಿಳಿಸಿದ್ದಾರೆ.
1970ರ ದಶಕದ ರಶ್ಯ ಬೆಂಬಲಿತ ಕಮ್ಯುನಿಸ್ಟ್ ಸರಕಾರವು ಅಂತ್ಯದಲ್ಲಿ ಡ್ಯುಪ್ರಿ ಹಾಗೂ ಆಕೆಯ ಪತಿಯನ್ನು ದೇಶದಿಂದ ಹೊರಗಟ್ಟಿದ್ದರಿಂದ, ಅವರಿಬ್ಬರೂ ಪಾಕಿಸ್ತಾನದ ಪೇಶಾವರ್‌ನಲ್ಲಿ ನೆಲೆಸಿದ್ದರು. ಪೇಶಾವರ್‌ನಲ್ಲಿದ್ದಾಗಲೂ ಆಕೆ ಅಪ್ಘಾನ್ ಯುದ್ಧಸಂತ್ರಸ್ತರಿಗೆ ನೆರವಾಗಿದ್ದರು ಹಾಗೂ ಅಫ್ಘಾನ್ ಕುರಿತ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸುತ್ತಿದ್ದರು. 2005ರಲ್ಲಿ ಅವರು ಅಫ್ಘಾನ್ ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ 35 ಸಾವಿರ ದಾಖಲೆಗಳೊಂದಿಗೆ ಕಾಬೂಲ್‌ಗೆ ಮರಳಿದ್ದರು. ಇದೀಗ ಈ ದಾಖಲೆಗಳನ್ನು ಕಾಬೂಲ್‌ನಲ್ಲಿರುವ ಅಫ್ಘಾನ್ ಕೇಂದ್ರದಲ್ಲಿರಿಸಲಾಗಿದೆ. 2006ರಿಂದ 2011ರವರೆಗೆ ಡ್ಯುಪ್ರಿ ಅಫ್ಘಾನ್ ಕೇಂದ್ರದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು.







