ಫ್ಲಾರಿಡಾದಲ್ಲಿ ‘ಇರ್ಮಾ’ ಆರ್ಭಟ
ಕನಿಷ್ಠ 4 ಬಲಿ, 2 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ

ಫ್ಲಾರಿಡಾ,ಸೆ.10: ಪ್ರಬಲವಾದ ಇರ್ಮಾ ಚಂಡಮಾರುತವು ರವಿವಾರ ಬೆಳಗ್ಗೆ ಫ್ಲಾರಿಡಾ ಕರಾವಳಿಯನ್ನು ಅಪ್ಪಳಿಸಿದ್ದು, ಹಲವಾರು ನಗರಗಳನ್ನು ಜಲಾವೃತಗೊಳಿಸಿದೆ. ಗಂಟೆಗೆ 130 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯೊಂದಿಗೆ ಅಪ್ಪಳಿಸಿರುವ ಚಂಡಮಾರುತದ ಆರ್ಭಟಕ್ಕೆ ಈವರೆಗೆ ಕನಿಷ್ಠ ನಾಲ್ಕು ಮಂದಿ ಬಲಿಯಾಗಿದ್ದಾರೆ.
ಶನಿವಾರ ಸಂಜೆಯ ವೇಳೆಗೆ ಚಂಡಮಾರುತವು ದುರ್ಬಲಗೊಂಡಿದ್ದರಿಂದ ಹವಾಮಾನ ಶಾಸ್ತ್ರಜ್ಞರು ಅದರ ತೀವ್ರತೆಯನ್ನು ಮೂರನೆ ಶ್ರೇಣಿಗೆ ಇಳಿಸಿದ್ದರು. ಆದರೆ ಶನಿವಾರ ಮಧ್ಯರಾತ್ರಿ ಹೊತ್ತಿಗೆ ಚಂಡಮಾರುತವು ಮತ್ತೆ ಬಲಿಷ್ಠಗೊಂಡಿದ್ದುದರಿಂದ ಅದನ್ನು ನಾಲ್ಕನೆ ಶ್ರೇಣಿಗೆ ಏರಿಸಲಾಗಿತ್ತು.
ಫ್ಲಾರಿಡಾ ಕೀಸ್ ಪ್ರದೇದ ಮೇಲೆ ರವಿವಾರ ಅಪ್ಪಳಿಸುವ ಮೂಲಕ ಅಮೆರಿಕದ ಪ್ರಧಾನ ಭೂಪ್ರದೇಶದಲ್ಲಿ ಮೊದಲ ಬಾರಿಗೆ ಇರ್ಮಾ ಆರ್ಭಟಿಸಿದೆ. ಚಂಡಮಾರುತವು ಫ್ಲಾರಿಡಾದ ಪಶ್ಚಿಮ ಕರಾವಳಿಯಲ್ಲಿರುವ ನೇಪಲ್ಸ್ ಹಾಗೂ ಮತ್ತಿತರ ನಗರಗಳಿಗೂ ಹಾನಿಯುಂಟು ಮಾಡುವ ಸಾಧ್ಯತೆಯಿರುವುದಾಗಿ ಹವಾಮಾನ ತಜ್ಞರು ಹೇಳಿದ್ದಾರೆ.
ಫ್ಲಾರಿಡಾದ ವಿವಿಧೆಡೆ ಚಂಡಮಾರುತದ ಸೃಷ್ಟಿಸಿದ ಅನಾಹುತದಿಂದಾಗಿ ಹಲವಾರು ಮರಗಳು ಹಾಗೂ ಕಟ್ಟಡಗಳು ಕುಸಿದುಬಿದ್ದಿದ್ದು, ನೂರಾರು ವಿದ್ಯುತ್‌ಕಂಬಗಳು ಧರಾಶಾಯಿಯಾಗಿವೆ.
ಏತನ್ಮಧ್ಯೆ, ಚಂಡಮಾರುತದಿಂದ ತತ್ತರಿಸಿರುವ ಫ್ಲಾರಿಡಾ ರಾಜ್ಯಾದ್ಯಂತ 2 ಲ ವಿದ್ಯುತ್ ಸಂಪರ್ಕ ಕಡಿತಗೊಂಡು, 10 ಲಕ್ಷಕ್ಕೂ ಅಧಿಕ ಮಂದಿ ಬಾಧಿತರಾಗಿದ್ದಾರೆ. 10ರಿಂದ 15 ಅಡಿ ಎತ್ತರದ ದೈತ್ಯಗಾತ್ರದ ಅಲೆಗಳು ಎವರ್‌ಗ್ಲೇಡ್ ಪ್ರದೇಶದ ಕರಾವಳಿಯನ್ನು ಅಪ್ಪಳಿಸುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚಂಡಮಾರುತದ ಹಿನ್ನೆಲೆಯಲ್ಲಿ ಫ್ಲಾರಿಡಾ ಕರಾವಳಿಯ ವಿವಿಧೆಡೆ 60.30 ಲಕ್ಷ ಮಂದಿಯ ಸ್ಥಳಾಂತರಗೊಳ್ಳುವಂತೆ ಆದೇಶಿಸಿದ್ದರು.
ಇರ್ಮಾ ಚಂಡಮಾರುತವು ಕೆರಿಬಿಯನ್ ದ್ವೀಪಸ್ತೋಮದ ಮೇಲೆ ಅಪ್ಪಳಿಸಿ, ಭಾರೀ ಹಾನಿಯುಂಟು ಮಾಡಿದ್ದು 25ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ.







