ಮಾಧ್ಯಮಗಳು ಯುದ್ಧದ ಆತಂಕ, ದುಷ್ಪರಿಣಾಮವನ್ನು ಸಮಾಜದೆದುರು ಚಿತ್ರಿಸುತ್ತಿವೆ: ಡಾ.ಕೆ.ಸಿ.ಶಿವಾರೆಡ್ಡಿ

ತುಮಕೂರು, ಸೆ.11: ಯುದ್ಧ ಭೀತಿ ಪ್ರಪಂಚವನ್ನು ಕಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ರಾಮಕೃಷ್ಣ-ವಿವೇಕಾನಂದರು ಸಾರಿದ ಸರ್ವಧರ್ಮ ಸಮನ್ವಯತೆಯ ಭಾವ ಅನಿವಾರ್ಯವಾಗಿದೆ ಎಂದು ಕುಪ್ಪಳ್ಳಿ ಕುವೆಂಪು ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಕೆ.ಸಿ.ಶಿವಾರೆಡ್ಡಿ ತಿಳಿಸಿದ್ದಾರೆ.
ರಾಮಕೃಷ್ಣ-ವಿವೇಕಾನಂದ ಆಶ್ರಮದ ರಜತ ಮಹೋತ್ಸವ ವರ್ಷದ ಅಂಗವಾಗಿ ಆಯೋಜಿಸಲಾಗಿರುವ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಭಾನುವಾರ ‘ಕುವೆಂಪು ಸಾಹಿತ್ಯ’ ಕುರಿತು ಉಪನ್ಯಾಸ ನೀಡಿದ ಅವರು ಯುದ್ಧಭೀತಿಯ ಜಾಗದಲ್ಲಿ ಶಾಂತಿ-ಪ್ರೀತಿಗಳು ಚಿಗುರಬೇಕಾಗಿದೆ ಎಂದರು.
ಯುದ್ಧದ ಆತಂಕ, ದುಷ್ಪರಿಣಾಮಗಳನ್ನೂ ಮಾಧ್ಯಮಗಳು ಸಮಾಜದೆದುರು ಚಿತ್ರಿಸುತ್ತಿವೆ. ಜನಸಾಮಾನ್ಯರು ಬದುಕಲು ಬೇಕಾಗುವ ಅನ್ನವನ್ನು ಬೆಳೆಯುವ ಬದಲು ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿದೆ. ಮಹಾಕವಿ ಕುವೆಂಪು ಇವರಿಬ್ಬರ ಅಪಾರ ಪ್ರಭಾವಕ್ಕೆ ಒಳಗಾಗಿದ್ದರು.ಇದು ಅವರ ಆತ್ಮಕಥೆ ನೆನಪಿನ ದೋಣಿಯೂ ಸೇರಿದಂತೆ ಅನೇಕ ಕೃತಿಗಳಲ್ಲಿ ಗಾಢವಾಗಿ ವ್ಯಕ್ತವಾಗಿದೆ ಎಮದು ವಿವರಿಸಿದರು.
ಬೆಂಗಳೂರು ವಿವಿಎಸ್ ಕಾಲೇಜು ಕನ್ನಡ ಪ್ರಾಧ್ಯಾಪಕಿ ಡಾ.ಪಿ.ಎಸ್.ಗೀತಾ ಮಾತನಾಡಿ, ಕನ್ನಡ ಸಾಹಿತ್ಯದ ಮೇಲೆ ಸ್ವಾಮಿ ವಿವೇಕಾನಂದರ ಪ್ರಭಾವ ಆಳವಾದದ್ದು.ಜಗತ್ತೆಲ್ಲ ಒಂದೇ ಎಂದ ಮೇಲೆ ಸಮಾಜದಲ್ಲಿ ದ್ವೇಷ, ಅಸಮಾನತೆ, ಅಶಾಂತಿ ಏಕೆ ಎಂದು ರಾಮಕೃಷ್ಣರು ಕೇಳುತ್ತಾರೆ. ವಿದ್ಯೆಯು ವ್ಯಕ್ತಿಯ ಮನಸ್ಸನ್ನು ಅರಳಿಸಬೇಕೇ ಹೊರತು ಕೆರಳಿಸಬಾರದು. ಸಮಾಜದ ಸ್ವಾಸ್ಥ್ಯಕ್ಕೆ ದಿವ್ಯತ್ರಯರ ಸಂದೇಶಗಳು ತೀರಾ ಅವಶ್ಯಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮೀ ವೀರೇಶಾನಂದಜೀ, ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಡಾ. ಸೋ. ಮು. ಭಾಸ್ಕರಾಚಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಜಿ. ಸಿದ್ಧರಾಮಯ್ಯ, ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪತ್ರಕರ್ತ ಜಿ. ಇಂದ್ರಕುಮಾರ್, ಸಾಹಿತಿಗಳಾದ ಪ್ರೇಮಾ ಮಲ್ಲಣ್ಣ, ನಾಗಲಕ್ಷ್ಮೀ, ಶೈಲಾ ನಾಗರಾಜ್ ಮತ್ತಿತರರು ವಿವಿಧ ಗೋಷ್ಠಿಗಳಲ್ಲಿ ಉಪಸ್ಥಿತರಿದ್ದರು.(ಫೊಟೋ ಇದೆ)







