ಭಾರತಕ್ಕೆ ಪುರುಷರ ಡಬಲ್ಸ್, ಮಿಶ್ರ ಡಬಲ್ಸ್ ಪ್ರಶಸ್ತಿ
ಖಾರ್ಕಿವ್ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಖಾರ್ಕಿವ್(ಉಕ್ರೇನ್), ಸೆ.10: ಖಾರ್ಕಿವ್ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಪುರುಷರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಜೋಡಿ ಪ್ರಶಸ್ತಿ ಗೆದ್ದುಕೊಂಡಿವೆ.
ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತದ ಕೆ.ನಂದಗೋಪಾಲ್ ಹಾಗೂ ರೋಹನ್ ಕಪೂರ್ ತಮ್ಮದೇ ದೇಶದ ಫ್ರಾನ್ಸಿಸ್ ಅಲ್ವಿನ್ ಹಾಗೂ ಕೊನಾ ತರುಣ್‌ರನ್ನು ಕೇವಲ 55 ನಿಮಿಷಗಳ ಹೋರಾಟದಲ್ಲಿ 18-21, 24-22, 21-18 ಗೇಮ್‌ಗಳಿಂದ ಮಣಿಸಿದ್ದಾರೆ.
ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಕೆ.ನಂದಗೋಪಾಲ್ ಅವರು ಮೋಹಿಮಾ ಅಗರ್‌ವಾಲ್ ಜೊತೆಗೂಡಿ ಮತ್ತೊಂದು ಪ್ರಶಸ್ತಿಯನ್ನು ಜಯಿಸಿದರು.
ಮೂರನೆ ಶ್ರೇಯಾಂಕದ ನಂದಗೋಪಾಲ್ ಹಾಗೂ ಅಗರವಾಲ್ ಭಾರತದ ಅಗ್ರ ಶ್ರೇಯಾಂಕದ ಜೋಡಿ ಸೌರಭ್ ಶರ್ಮ ಹಾಗೂ ಅನೌಷ್ಕಾ ಪಾರಿಖ್‌ರನ್ನು ಕೇವಲ 30 ನಿಮಿಷಗಳ ಕಾಲ ನಡೆದಿದ್ದ ಫೈನಲ್ ಫೈಟ್‌ನಲ್ಲಿ 1-14, 21-15 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಭಾರತದ ಇನ್ನೋರ್ವ ಆಟಗಾರ್ತಿ ಶ್ರೀಕೃಷ್ಣ ಪ್ರಿಯಾ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಎಡವುವ ಮೂಲಕ ಕೂದಲೆಳೆಯಿಂದ ಪ್ರಶಸ್ತಿ ವಂಚಿತರಾದರು.
ಮೂರನೆ ಶ್ರೇಯಾಂಕದ ಶ್ರೀಕೃಷ್ಣ ಪ್ರಿಯಾ ಒಂದು ಗಂಟೆಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ನಟಾಲಿಯಾ ವಾಯ್ಸೆಕ್ ವಿರುದ್ಧ 21-18, 16-21, 21-23 ಅಂತರದಿಂದ ಸೋತಿದ್ದಾರೆ.







