ರುಚಿಕರವಾದ ಕೇರಳ ಮಟನ್ ಸ್ಟ್ಯೂ ತಯಾರಿಸುವ ವಿಧಾನ

'ಕೇರಳ ಮಟನ್ ಸ್ಟ್ಯೂ' ದಕ್ಷಿಣ ಭಾರತದ ಜನಪ್ರಿಯ ಖಾದ್ಯ. ಮಾಂಸ, ಬಟಾಟೆ ಮತ್ತು ಈರುಳ್ಳಿ ಬಳಸಿ ಇದನ್ನು ತಯಾರಿಸಲಾಗುತ್ತದೆ. ಮನೆಯಲ್ಲಿ ಯಾವುದೇ ವಿಶೇಷ ಸಮಾರಂಭವಿದ್ದರೂ ಇದನ್ನು ತಯಾರಿಸಿ ಅದರ ವಿಶೇಷ ರುಚಿಯನ್ನು ಆಸ್ವಾದಿಸಬಹುದು. ಬಾಯಲ್ಲಿ ನೀರೂರಿಸುವ 'ಕೇರಳ ಮಟನ್ ಸ್ಟ್ಯೂ' ತಯಾರಿಸುವ ವಿಧಾನ ಇಲ್ಲಿದೆ.
ಕೇರಳ ಮಟನ್ ಸ್ಟ್ಯೂ ತಯಾರಿಸಲು ಅಗತ್ಯ ಸಾಮಗ್ರಿಗಳು - ಇಬ್ಬರಿಗೆ ಸಾಕಾಗುವಷ್ಟು
250 ಗ್ರಾಂ ಕ್ಯೂಬ್ ಮಾಡಲ್ಪಟ್ಟ ಹಾಗೂ ಬೇಯಿಸಿದ ಮಾಂಸ
2 ತುಂಡರಿಸಿದ ಮೆಣಸಿನಕಾಯಿ
1/2 ಟೀ ಚಮಚ ಪೆಪ್ಪರ್ ಕಾರ್ನ್
2 ಚಿಟಿಕೆ ಉಪ್ಪು
2 ಚಿಟಿಕೆ ಘರಂ ಮಸಾಲೆ ಹುಡಿ
25 ಗ್ರಾಂ ತುಂಡರಿಸಿ ಬೇಯಿಸಿದ ಕ್ಯಾರೆಟ್
50 ಗ್ರಾಂ ತುಂಡರಿಸಿದ ಈರುಳ್ಳಿ
5 ಗ್ರಾಂ ಶುಂಠಿ
1/2 ಕಪ್ ತೆಂಗಿನಕಾಯಿ ಹಾಲು
50 ಎಂಎಲ್ ಸಾಸಿವೆ ಎಣ್ಣೆ
70 ಗ್ರಾಂ ತುಂಡರಿಸಿದ, ಬೇಯಿಸಿದ ಬಟಾಟೆ
ಸ್ವಲ್ಪ ಕರಿಬೇವಿನ ಸೊಪ್ಪು
ಅಲಂಕಾರಕ್ಕೆ
1 ಟೀ ಚಮಚ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ
* ಮೊದಲು ಮಾಂಸವನ್ನು ಚೆನ್ನಾಗಿ ತೊಳೆಯಿರಿ. ಒಂದು ಪಾತ್ರೆಗೆ ನೀರು ಸೇರಿಸಿ ಸ್ಟವ್ ಮೇಲೆ ದೊಡ್ಡ ಉರಿಯಲ್ಲಿಡಿ. ಅದಕ್ಕೆ ಮಾಂಸ ಸೇರಿಸಿ ಶುಂಠಿಯೊಂದಿಗೆ ಬೇಯಿಸಿ ಬದಿಗಿಡಿ.
* ಇನ್ನೊಂದು ಪಾತ್ರೆಯಲ್ಲಿ ಬಟಾಟೆ ಮತ್ತು ಕ್ಯಾರೆಟ್ ಬೇಯಿಸಿ ಬದಿಗಿಡಿ. ಬಾಣಲೆಯಲ್ಲಿ ಸಾಸಿವೆ ಎಣ್ಣೆ ಹಾಕಿ, ನಂತರ ಅದಕ್ಕೆ ಘರಂ ಮಸಾಲ, ಈರುಳ್ಳಿ, ಮೆಣಸಿನಕಾಯಿ, ಶುಂಠಿ, ಕರಿಬೇವಿನ ಸೊಪ್ಪು ಹಾಗೂ ಪೆಪ್ಪರ್ ಕಾರ್ನ್ ಸೇರಿಸಿ. ದೊಡ್ಡ ಉರಿಯಲ್ಲಿ ಅವುಗಳನ್ನು ಕೆಲವು ನಿಮಿಷಗಳ ಕಾಲ ಹುರಿಯಿರಿ.
* ಬೇಯಿಸಿದ ಮಾಂಸ ತುಂಡುಗಳು, ಬಟಾಟೆ, ಕ್ಯಾರೆಟ್ ಹಾಗೂ ತೆಂಗಿನಕಾಯಿ ಹಾಲನ್ನು ಹಾಕಿ ಐದಾರು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಅದನ್ನು ಸರ್ವಿಂಗ್ ಬೌಲ್ ಗೆ ಸುರಿದು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಸ್ವಾದಿಷ್ಟ ಕೇರಳ ಮಟನ್ ಸ್ಟ್ಯೂ ರೆಡಿ.









