ಸೆ.14 ರಂದು ಕಾರ್ಮಿಕರಿಂದ ಬೆಂಗಳೂರು ಚಲೋ: ಸೈಯದ್ ಮುಜೀಬ್

ತುಮಕೂರು, ಸೆ.11: ಮಾಸಿಕ ಕನಿಷ್ಠ 18 ಸಾವಿರ ರೂ. ವೇತನ, ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆ, ಯೋಜನೆ ಕಾರ್ಮಿಕರಿಗೆ ಕನಿಷ್ಠ ವೇತನ, ಜಿಲ್ಲೆಗೊಂದು ಕಾರ್ಮಿಕ ನ್ಯಾಯಾಲಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟಂಬರ್ 14 ರಂದು ಸಿಐಟಿಯು ನೇತೃತ್ವದಲ್ಲಿ ವಿವಿಧ ನೌಕರರ ಸಂಘಗಳಿಂದ ಬೃಹತ್ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯಸಮಿತಿ ಸದಸ್ಯ ಸೈಯದ್ ಮುಜೀಬ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರಕಾರ 7ನೆ ವೇತನ ಆಯೋಗದ ವರದಿಯಲ್ಲಿ ಕೌಶಲ್ಯ ರಹಿತ ಕಾರ್ಮಿಕರಿಗೆ ಕನಿಷ್ಠ ವೇತನ 18 ಸಾವಿರ ನೀಡಬೇಕೆಂದು ಶಿಫಾರಸು ಮಾಡಿದೆ. ಆದರೆ ಕೇಂದ್ರದ ಯೋಜನೆಗಳು ಮತ್ತು ರಾಜ್ಯದ ಯೋಜನೆಗಳಲ್ಲಿ ಇದಕ್ಕಿಂತಲೂ ಕಡಿಮೆ ವೇತನ ನೀಡುವ ಮೂಲಕ ಕಾರ್ಮಿಕರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂದರು.
ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಸಂವಿಧಾನ ಬದ್ಧವಾಗಿ ಸಂಘಟಿತರಾಗಲು ಅವಕಾಶ ನೀಡಿದ ಆಡಳಿತ ಮಂಡಳಿ, ತಾವು ಮಾತ್ರ ಮಾಲಕರ ನೇತೃತ್ವದ ಹಲವು ಸಂಘಟನೆಗಳ ಸದಸ್ಯರಾಗಿ, ಕಾಮಿರ್ಕರು ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳಲು ಅವಕಾಶ ನೀಡದೆ ವಂಚಿಸಲಾಗುತಿದೆ. ಕಾರ್ಮಿಕರು ಸಂಘಟಿತರಾಗಲು ಅವಕಾಶ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದರು.
ಸರಕಾರವೇ ನೀಡಿದ ವಾಗ್ಧಾನದಂತೆ ಗುತ್ತಿಗೆ ಪದ್ಧತಿ ರದ್ದು ಮಾಡಿಲ್ಲ. ಇದುವರೆಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಖಾಯಂ ಮಾಡಿಲ್ಲ. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕೆಂಬುದು ನಮ್ಮ ಪ್ರಬಲ ಬೇಡಿಕೆಯಾಗಿದೆ. ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತರೇ ಸಮಸ್ಯೆಗಳು ಸಾಕಷ್ಟಿವೆ. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಬೃಹತ್ ಹೋರಾಟವನ್ನು ರೂಪಿಸಲಾಗುತ್ತಿದೆ. ರಾಜ್ಯದ ವಿವಿಧೆಡೆಗಳಿಂದ 50 ಸಾವಿರ ಜನರ ಕಾರ್ಮಿಕರು ಒಂದೇಡೆ ಸೇರಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ನಿರ್ಣಾಯಕ ಹೋರಾಟದಲ್ಲಿ ಎಲ್ಲಾ ಕಾರ್ಮಿಕರು ಭಾಗಿಯಾಗುವಂತೆ ಸೈಯದ್ ಮುಜೀಬ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯುನ ಎನ್.ಕೆ.ಸುಬ್ರಮಣ್ಯ,ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.







