ಅಣ್ಣನ ಕೊಲೆ ಪ್ರಕರಣ: ಆರೋಪಿ ತಮ್ಮನ ಬಂಧನ

ತುಮಕೂರು, ಸೆ.11: ಆಸ್ತಿ ಆಸೆಗಾಗಿ ಮದುವೆ ನಿಶ್ಚಿತಾರ್ಥಕ್ಕೆ ಸಿದ್ಧನಾಗಿದ್ದ ತನ್ನ ಅಣ್ಣನನ್ನೇ ತಮ್ಮ ಕೊಲೆ ಮಾಡಿ, ದೇಹ ಸಮೇತ ಸುಟ್ಟು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ದಂಡಿನ ಶಿವರ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟಂಬರ್ 2ರಂದು ದಂಡಿನಶಿವರ ಪೊಲೀಸ್ ಠಾಣೆಗೆ ಬಂದ ದೂರಿನ ಅನ್ವಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕುಣಿಗಲ್ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರಕರಣ ಪತ್ತೆಗೆ ತಂಡ ರಚಿಸಿದ್ದು, ತಂಡ ತನಿಖೆ ನಡೆಸುವ ವೇಳೆ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದ ಮೃತ ಹಂಸಕುಮಾರ್‍ನ ತಮ್ಮ ಬಸವೇಶನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ಹಂಸಕುಮಾರ್‍ಗೆ 40 ವರ್ಷವಾದರೂ ಮದುವೆಯಾಗಿರುವುದಿಲ್ಲ. ಆದರೆ ಆತನ ತಮ್ಮ ಬಸವೇಶನಿಗೆ ಮದುವೆ ಯಾಗಿದ್ದು,ಅಣ್ಣ ಮದುವೆಯಾಗದಿದ್ದರೆ ಆತನ ಆಸ್ತಿ ನನಗೆ ದೊರೆಯುತ್ತದೆ ಎಂಬ ದುರುದ್ದೇಶದಿಂದ ಮದುವೆಯ ಕನಸು ಕಾಣುತ್ತಾ ಮಲಗಿದ್ದ ಹಂಸ ಕುಮಾರನ ಕುತ್ತಿಗೆ ಬಿಗಿದು ಕೊಲೆ ಮಾಡಿ, ಮೃತದೇಹವನ್ನು ಮಾರುತಿ ಜೆನ್ ಕಾರಿನಲ್ಲಿ ತುಂಬಿಕೊಂಡು ತೋಟಕ್ಕೆ ಹೋಗಿ, ಅಲ್ಲಿ ಮತೃದೇಹ ಕಾರಿನ ಮುಂದಿನ ಸೀಟಿನಲ್ಲಿ ಇರುವಂತೆ ಕೂರಿಸಿ, ಈಗಾಗಲೇ ಸಿದ್ದಪಡಿಸಿಕೊಂಡಿದ್ದ ಪೆಟ್ರೋಲ್ ಮತ್ತು ಡಿಸೇಲ್‍ನ್ನು ಕಾರಿನ ಮೇಲೆ ಎರಚಿ, ಬೆಂಕಿ ಹಚ್ಚಿ ಕೊಲೆ ಮಾಡಿ ನಮ್ಮ ಅಣ್ಣನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ನೆಂಟರಿಷ್ಟರ ಎದುರು ಅವಲತ್ತುಕೊಂಡಿದ್ದನ್ನು. ಈ ಬಗ್ಗೆ ಅನುಮಾನಗೊಂಡ ಪೊಲೀಸರು ತಮ್ಮ ಬಸವೇಶನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.







