ರಾಜ್ಯ ಸರಕಾರಕ್ಕೆ ತಾಕತ್ತು ಇಲ್ಲವೆಂದರೆ, ಸಿಬಿಐಗೆ ನೀಡಿ: ಶೋಭಾ ಕರಂದ್ಲಾಜೆ
ಗೌರಿಲಂಕೇಶ್ ಹತ್ಯೆ ಪ್ರಕರಣ

ಬೆಂಗಳೂರು, ಸೆ.11: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಆರೋಪಿಗಳನ್ನು ಹಿಡಿಯುವ ತಾಕತ್ತು ರಾಜ್ಯ ಸರಕಾರಕ್ಕೆ ಇಲ್ಲವೆಂದರೆ, ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಸೋಮವಾರ ನಗರದ ವೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಧಾರವಾಡದಲ್ಲಿ ಡಾ.ಎಂ.ಎಂ.ಕಲಬರ್ಗಿ ಅವರ ಹತ್ಯೆ ನಡೆದಿದೆ. ಬಳಿಕ ಬೆಂಗಳೂರಿನಲ್ಲಿಯೇ ಗೌರಿ ಲಂಕೇಶ್ ಹತ್ಯೆ ನಡೆದಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮೊದಲು ವಿಚಾರವಾದಿಗಳಿಗೆ ಏಕೆ ರಕ್ಷಣೆ ನೀಡಿಲ್ಲ ಎಂದು ಪ್ರಶ್ನಿಸಿದ ಅವರು, ಹಂತಕರನ್ನು ಹಿಡಿಯುವ ತಾಕತ್ತು ರಾಜ್ಯ ಸರಕಾರಕ್ಕೆ ಇಲ್ಲದಿದ್ದರೆ, ಸಿಬಿಐ ಮೂಲಕ ತನಿಖೆ ನಡೆಯಲಿ ಎಂದು ಹೇಳಿದರು.
ನಾಡಿನ ಬುದ್ಧಿಜೀವಿಗಳು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾರೆ. ಹೀಗಾಗಿ, ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಒಳ್ಳೆಯ ಅಧಿಕಾರಿಗಳಿಂದ ತನಿಖೆ ನಡೆಸಿ ಹಂತಕರನ್ನು ಬಂಧಿಸುವ ಕಾರ್ಯ ಆಗಬೇಕು ಎಂದು ಶೋಭಾ ಕರಂದ್ಲಾಜೆ ನುಡಿದರು.







