ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಂಘಪರಿವಾರದ ಕೈವಾಡವಿದೆ: ಸಿರಿಮನೆ, ನೂರ್ ಶ್ರೀಧರ್ ಆರೋಪ

ಬೆಂಗಳೂರು, ಸೆ.10: ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯಲ್ಲಿ ನಕ್ಸಲೀಯರ ಕೈವಾಡವಿರಲು ಸಾಧ್ಯವೇ ಇಲ್ಲ. ಈ ಪ್ರಕರಣದಲ್ಲಿ ಸಂಘಪರಿವಾರದ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮಾಜಿ ನಕ್ಸಲ್ ಚಳವಳಿಗಾರರಾದ ಸಿರಿಮನೆ ನಾಗರಾಜ್ ಹಾಗೂ ನೂರ್ ಶ್ರೀಧರ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿರುವವರು ಹಾಗೂ ಕೆಲ ಮಾಧ್ಯಮಗಳು ಗೌರಿ ಹತ್ಯೆಯಲ್ಲಿ ನಕ್ಸಲರ ಕೈವಾಡವಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.
ನಕ್ಸಲ್ ಚಳವಳಿಯಲ್ಲಿ 40 ವರ್ಷಗಳ ಕಾಲ ತೊಡಗಿಸಿಕೊಂಡಿದ್ದು, ಅಲ್ಲಿನ ನೀತಿ-ನಿಯಮಗಳನ್ನು ಅರಿತು ಕೊಂಡಿದ್ದೇವೆ. ಮಾವೋಯಿಸ್ಟ್ ಪಕ್ಷ ಶಿಸ್ತು ಬದ್ಧ ರಾಜಕೀಯ ಪಕ್ಷವಾಗಿದ್ದು, ಅದಕ್ಕೆ ತನ್ನದೇ ಆದ ಪ್ರಣಾಳಿಕೆ ಮತ್ತು ಸಂವಿಧಾನವಿದೆ. ಅಲ್ಲದೆ, ಕಟ್ಟುನಿಟ್ಟಾದ ನೀತಿಗಳಿವೆ. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಒಂದು ವಿಧಾನವಿದೆ. ಮನವರಿಕೆ, ವಿಮರ್ಶೆ, ಆತ್ಮ ವಿಮರ್ಶೆ, ಎಚ್ಚರಿಕೆ, ಸಸ್ಪೆಂಡ್, ಅನಿವಾರ್ಯ ಪರಿಸ್ಥಿತಿಗಳಲ್ಲಿ ಉಚ್ಛಾಟನೆ ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕೊಲೆಯಲ್ಲ ದೇಹ ಮುಟ್ಟುವ ಹಕ್ಕು ಇರುವುದಿಲ್ಲ. ಆದರೆ, ಚರ್ಚೆ, ಎಚ್ಚರಿಕೆಗಳು ಮೀರಿದಾಗ ಅಗತ್ಯವಿರುವಷ್ಟು ದೇಹ ದಂಡನೆ ಅಥವಾ ಮರಣದಂಡನೆ ವಿಧಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಬಹಿರಂಗ ಪ್ರಕಟನೆ ನೀಡಬೇಕು ಎಂಬ ನಿಯಮಗಳಿವೆ ಎಂದು ಅವರು ವಿವರಿಸಿದರು.
ನಕ್ಸಲರೊಂದಿಗಿನ ಗೌರಿ ಸಂಬಂಧ: ನಕ್ಸಲ್ ಚಳವಳಿಯ ಮುಖಂಡರಾಗಿದ್ದ ಸಾಕೇತ್ ರಾಜನ್ ನಡೆಸಿದ ರಹಸ್ಯ ಸುದ್ದಿಗೋಷ್ಠಿಯ ಮೂಲಕ ಗೌರಿ ನಕ್ಸಲ್ ಚಳವಳಿಗೆ ಪರಿಚಯಿಸಿಕೊಂಡರು. ಅನಂತರ ಶಾಂತಿಗಾಗಿ ನಾಗರಿಕರ ವೇದಿಕೆ ರಚಿಸುವ ಮೂಲಕ ಸಶಸ್ತ್ರ ಸಂಘರ್ಷ ಹಾಗೂ ಪ್ರಾಣಹಾನಿ ತಡೆಯಲು ಗಂಭೀರವಾಗಿ ಪ್ರಯತ್ನಿಸಿದರು. ಇದಕ್ಕಾಗಿ ಸರಕಾರದ ಜೊತೆಗೆ ಗಂಭೀರ ಚರ್ಚೆ ನಡೆಸಿದ್ದರು. ಅಲ್ಲದೆ, ಸಾಕೇತ್‌ರಾಜನ್ ಹತ್ಯೆ ನಡೆದಾಗ ಪತ್ರಿಕೆಯ ಮೂಲಕ ಸರಕಾರದ ನೀತಿಯನ್ನು ಖಂಡಿಸಿದ್ದರು ಎಂದರು.
ನಂತರದ ದಿನಗಳಲ್ಲಿ ನಾವು ನಕ್ಸಲ್ ಚಳವಳಿಯಿಂದ ಹೊರಬಂದರೂ, ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ, 2014 ರಲ್ಲಿ ಎ.ಕೆ.ಸುಬ್ಬಯ್ಯ, ಗೌರಿ ಲಂಕೇಶ್ ಹಾಗೂ ದೊರೆಸ್ವಾಮಿ ನೇತೃತ್ವದ ಸಮಿತಿ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿದರು. ಅನಂತರ ನಾವು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಈ ವೇಳೆ ನಾವು ಕ್ರಾಂತಿಯ ಹಾದಿ ತೊರೆದಿರುವುದನ್ನು ಮಾತ್ರ ಖಂಡಿಸಿ ಮಾವೋವಾದಿ ಪಕ್ಷ ಪತ್ರಿಕಾ ಪ್ರಕಟನೆ ನೀಡಿತ್ತು, ಗೌರಿ ಲಂಕೇಶ್ ವಿರುದ್ಧ ಯಾವುದೇ ಹೇಳಿಕೆ ನೀಡಿರಲಿಲ್ಲ ಎಂದು ನುಡಿದರು.
ಮಾವೋವಾದಿಗಳು ಗೌರಿ ಲಂಕೇಶ್ ವಿರುದ್ಧ ಇದುವರೆಗೂ ಒಂದು ಖಂಡನಾ ಹೇಳಿಕೆಯಾಗಲಿ, ಕರಪತ್ರವಾಗಲಿ, ಕೈ ಬರಹದ ಪೋಸ್ಟರ್ ಹಾಕಿಲ್ಲ. ಆದರೆ, ನಕ್ಸಲ್ ಚಳವಳಿಯ ನಾಯಕ ಬಿ.ಜಿ.ಕೃಷ್ಣಮೂರ್ತಿ ಕಳಿಸುತ್ತಿದ್ದ ಕವನವನ್ನು ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಅಂದರೆ ನಕ್ಸಲ್‌ರ ಹಾಗೂ ಗೌರಿಯ ನಡುವೆ ಯಾವುದೇ ಸೈದ್ಧಾಂತಿಕ ಹಾಗೂ ವೈಯುಕ್ತಿಕ ಭಿನ್ನಾಭಿಪ್ರಾಯಗಳಿರಲಿಲ್ಲ ಎಂದರು.
ಶೇ.99 ಹತ್ಯೆ ಮಾಡಿರುವ ಅನುಮಾನ: ಗೌರಿ ಲಂಕೇಶ್‌ರನ್ನು ಅತಿದೊಡ್ಡ ಶತ್ರುವೆಂದು ದ್ವೇಷಿಸುತ್ತಿದ್ದ, ಅವರ ಮೇಲೆ ಹಲವು ಬಾರಿ ದಾಳಿ ಮಾಡಿಸಿದ, ಅವರ ಸಾವನ್ನು ಬಯಸುತ್ತಿದ್ದ, ಗೌರಿಯ ಸಾವನ್ನು ಸಂಭ್ರಮಿಸಿದ ಹಾಗೂ ಈಗ ಗೌರಿ ಹತ್ಯೆಯ ಕುರಿತು ಗೊಂದಲ ಮೂಡಿಸುತ್ತಿರುವ, ತನಿಖೆಯನ್ನು ದಿಕ್ಕು ತಪ್ಪಿಸುತ್ತಿರುವವರೇ ಗೌರಿಯನ್ನು ಕೊಂದಿದ್ದಾರೆ. ಇದೆಲ್ಲವನ್ನೂ ಮಾಡಿರುವುದು ಹಾಗೂ ಮಾಡುತ್ತಿರುವುದು ಸಂಘಪರಿವಾರ ಎಂದು ಆರೋಪಿಸಿದರು.
ಗೌರಿ ಲಂಕೇಶ್‌ರನ್ನು ಸಂಘಪರಿವಾರ ಹತ್ಯೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಒಂದು ವೇಳೆ ಈ ಹತ್ಯೆಯಲ್ಲಿ ನಕ್ಸಲರ ಕೈವಾಡವಿದೆ ಎಂದು ಸಾಬೀತಾದರೆ ನಮ್ಮನ್ನು ಸೇರಿಸಿದಂತೆ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ ಇದರಲ್ಲಿ ಸಂಘಪರಿವಾರದ ಕೈವಾಡವಿದೆ ಎಂದು ಸಾಬೀತಾದರೆ ಸುಳ್ಳು ಪ್ರಚಾರ ನಡೆಸುತ್ತಿರುವ ಮಾಧ್ಯಮ ಹಾಗೂ ಜನಪ್ರತಿನಿಧಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ವಿಕ್ರಂ ಗೌಡ ಹಾಗೂ ಲತಾ ಅವರು ನ್ಯಾಶನಲ್ ಪಾರ್ಕ್ ಹೆಸರಿನಲ್ಲಿ ಸರಕಾರ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ಖಂಡಿಸಿ ತಮ್ಮ ‘ಕೊಡಿಗೆ’ಗಳನ್ನು ಉಳಿಸಿಕೊಳ್ಳುವ ಸಲುವಾಗಿ ಸಶಸ್ತ್ರ ದಳಗಳಿಗೆ ಸೇರ್ಪಡೆಯಾದರು. ಆದರೆ, ಈಗ ವಿಕ್ರಂಗೌಡ ಗೌರಿ ಕೊಲೆ ಮಾಡಿದ್ದಾನೆ ಎಂದು ಪ್ರಚಾರ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ. ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗಿಂತ ಎಸ್‌ಐಟಿ ತನಿಖೆ ಮಾಡುವುದೇ ಸೂಕ್ತ.
- ಸಿರಿಮನೆ ನಾಗರಾಜ್, ಮಾಜಿ ನಕ್ಸಲ್ ಚಳವಳಿಗಾರ







