ವಿಧಾನಸೌಧಕ್ಕೆ ಬಾಂಬ್ ಬೆದರಿಕೆ: ಮೂವರ ಬಂಧನ

ಬೆಂಗಳೂರು, ಸೆ.11: ವಿಧಾನಸೌಧ ಹಾಗೂ ನೆಹರು ತಾರಾಲಯಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಪ್ರಕರಣ ಸಂಬಂಧ ಮೂವರನ್ನು ಇಲ್ಲಿನ ಆರ್‌ಎಂಸಿ ಯಾರ್ಡ್, ವಿಧಾನಸೌಧ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ನಿವಾಸಿಗಳಾದ ಸುರೇಶ್, ನಾಗರಾಜು, ಶ್ರೀಧರ್ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು, ಓರ್ವ ಓಲಾ ಕಾರು ಚಾಲಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ: ಸೋಮವಾರ 12:50 ಸುಮಾರಿಗೆ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿದ ಸುರೇಶ್ ಎಂಬಾತ ವಿಧಾನಸೌಧಕ್ಕೆ ಹಾಗೂ ನೆಹರು ತಾರಾಲಯಕ್ಕೆ ಬಾಂಬ್ ಹಾಕುತ್ತೇನೆ ಎಂದು ಹೇಳಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶ್ವಾನದಳ ಸಿಬ್ಬಂದಿ ವಿಧಾನಸೌಧ ಆವರಣದಲ್ಲಿ ಪರಿಶೀಲನೆ ನಡೆಸಿದರು. ಈ ಸಂಬಂಧ ಸ್ವಯಂ ದೂರು ದಾಖಲಿಸಿಕೊಂಡಿರುವ ವಿಧಾನಸೌಧ ಠಾಣಾ ಪೊಲೀಸರು, ಕರೆ ಬಂದಿದ್ದ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
Next Story





