ಫೆಬ್ರವರಿಯೊಳಗೆ ಕಾಮಗಾರಿ ಪೂರ್ಣ: ಸಚಿವ ಜಾರ್ಜ್
ಫ್ರೀಡಂ ಪಾರ್ಕ್ ಬಳಿ ಬಹುಪಯೋಗಿ ವಾಹನ ನಿಲುಗಡೆ ಕಟ್ಟಡ

ಬೆಂಗಳೂರು, ಸೆ. 11: ಬಿಬಿಎಂಪಿ ವತಿಯಿಂದ ನಗರದ ಫ್ರೀಡಂ ಪಾರ್ಕ್ ಬಳಿ ನಿರ್ಮಿಸುತ್ತಿರುವ ಮೂರು ಅಂತಸ್ತುಗಳ ಬಹುಪಯೋಗಿ ವಾಹನ ನಿಲುಗಡೆ ಕಟ್ಟಡದ ನಿರ್ಮಾಣ ಕಾಮಗಾರಿ ಮುಂದಿನ ಫೆಬ್ರವರಿಯೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮೇಯರ್ ಜಿ.ಪದ್ಮಾವತಿ ಅವರೊಂದಿಗೆ ನಿಲುಗಡೆ ಕಾಮಗಾರಿ ವೀಕ್ಷಿಸಿದ ಸಚಿವ ಜಾರ್ಜ್, 70 ಕೋಟಿ ರೂ. ವೆಚ್ಚದಲ್ಲಿ 2015ರ ಡಿಸೆಂಬರ್‌ನಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ, ಕಲ್ಲುಬಂಡೆ ಮತ್ತು ಗ್ರಾನೈಟ್‌ಗಳು ಇದ್ದುದ್ದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ತಿಳಿಸಿದರು.
ಕಾಮಗಾರಿ ವೇಳೆ ಗ್ರಾನೈಟ್ ಕಲ್ಲುಗಳು ಸಿಕ್ಕಿದ್ದರಿಂದ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರು ಗೌರವಧನ ನೀಡುವಂತೆ ಮನವಿ ಮಾಡಿದ್ದರು. ನಂತರ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗ್ರಾನೈಟ್ ಅನ್ನು ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.
ಈ ಸ್ಥಳದಲ್ಲಿ ಅಂದಾಜು 500 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಸ್ಥಳಾವಕಾಶವಿದೆ. ಈ ಪ್ರಮಾಣವನ್ನು ಇನ್ನೊಂದು ರ್ಯಾಂಪ್ ಅಳವಡಿಕೆ ಮಾಡುವ ಮೂಲಕ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದ ಅವರು, ನಗರದಲ್ಲಿ ದಾಖಲೆಯ ಮಳೆ ಬಂದು ರಸ್ತೆಗಳು ಹಾಳಾಗಿವೆ. ಇದುವರೆಗೂ ಇಷ್ಟೊಂದು ದೊಡ್ಡ ಮಳೆ ಬಂದ ಉದಾಹರಣೆ ಇಲ್ಲ. ಮಳೆಗಾಲ ಮುಗಿಯುತ್ತಿದ್ದಂತೆ, ನಗರದ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಲಾಗುವುದು ಎಂದು ಸಚಿವ ಜಾರ್ಜ್ ತಿಳಿಸಿದರು.
ಜೆಡಿಎಸ್‌ಯೊಂದಿಗಿನ ಮೈತ್ರಿ: ಮುಂದಿನ ದಿನಗಳಲ್ಲಿ ನಡೆಯಲಿರುವ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಜನತಾದಳ(ಎಸ್) ಮೈತ್ರಿ ಮುಂದುವರೆಯಲಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದರು.
ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಮುಂದುವರೆಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಆಕ್ಷೇಪವೆತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ಆ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







