ಮತೀಯ ಸಂಘಟನೆಗಳ ಕೃತ್ಯ ತಡೆಗೆ ದಿಲ್ಲಿ ಚಲೋ: ಸಚಿವ ರಮಾನಾಥ ರೈ

ಬೆಂಗಳೂರು, ಸೆ. 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮತೀಯ ಸಂಘಟನೆಗಳ ಕೃತ್ಯಗಳನ್ನು ತಡೆಗಟ್ಟಲು ‘ಹೊಸದಿಲ್ಲಿ ಚಲೋ’ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ಇಲಾಖೆ ಸಿಬ್ಬಂದಿ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೆ.12ರಂದು ನಡೆಸಲು ಉದ್ದೇಶಿಸಿದ್ದ ಮಂಗಳೂರು ‘ಸೌಹಾರ್ದಯುವ ನಡಿಗೆ’ ಕಾರ್ಯಕ್ರಮ ಮುಂದೂಡಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರಿಸ್ಥಿತಿ ಹದಗೆಡಿಸಲು ಕೋಮುವಾದಿ ಶಕ್ತಿಗಳು ಯೋಜನೆ ರೂಪಿಸುತ್ತಿವೆ. ಹೀಗಾಗಿ ಗೃಹ ಇಲಾಖೆ ಸೌಹಾರ್ದ ನಡಿಗೆ ಮುಂದೂಡಲು ಸೂಚಿಸಿದೆ. ಸದ್ಯ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಆದರೆ, ಅದನ್ನು ಕದಡಲು ಪ್ರಯತ್ನ ನಡೆಯುತ್ತಿದ್ದು, ರಾತ್ರೋರಾತ್ರಿ ಕೊಲೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಮಂಗಳೂರು ಚಲೋ ಬೈಕ್ ರ್ಯಾಲಿ ದಕ್ಷಿಣ ಜಿಲ್ಲೆಯಲ್ಲಿ ಏನೂ ಪ್ರಭಾವ ಬೀರಿಲ್ಲ. ಶಾಂತಿ ಕದಡುವ ಬಿಜೆಪಿ ಯತ್ನವನ್ನು ರಾಜ್ಯ ಸರಕಾರ ಸಮರ್ಥವಾಗಿ ನಿಯಂತ್ರಣ ಮಾಡಿದೆ ಎಂದು ರಮಾನಾಥ ರೈ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.







