ಸೆ.14ರಿಂದ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪಂಜಿನ ಮೆರವಣಿಗೆ
ಶಿವಮೊಗ್ಗ, ಸೆ.11: ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಗರದಲ್ಲಿ ಸೆ. 14 ರಂದು ಸಂಜೆ 5.30 ಕ್ಕೆ ಗೌರಿ ಲಂಕೇಶ್ ಹತ್ಯೆ ವಿರೋಧಿ ಒಕ್ಕೂಟದ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ಮತ್ತು ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಪ್ರಮುಖ ಕೆ.ಟಿ.ಗಂಗಾಧರ್ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಂತಕರನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಲು ಮತ್ತು ಸರ್ಕಾರಕ್ಕೆ ಈ ಬಗ್ಗೆ ಎಚ್ಚರಿಕೆ ನೀಡಲು ಸರ್ಕಾರದ ಗಮನ ಸೆಳೆಯಲು ಪ್ರಜಾಪ್ರಭುತ್ವದ ಆಶಯಗಳನ್ನು ಖಂಡಿಸಲು ಗೌರಿಯಂತಹ ಶಕ್ತಿಯ ಹತ್ಯೆಯ ಹಿಂದೆ ಇರುವ ಕತ್ತಿ ಮಸೆಯುವ ಶಕ್ತಿಗಳನ್ನು ಹತ್ತಿಕ್ಕುವ ಕೆಲಸ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ ಎಂದರು.
ಪಂಜಿನ ಮೆರವಣಿಗೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಭಾಗವಹಿಸುವ ನಿರೀಕ್ಷೆಯಿದೆ. ಇದೊಂದು ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತ ಮೆರವಣಿಗೆಯಾಗಿದೆ. ರಾಜಕೀಯ ಪಕ್ಷದವರು ವಿವಿಧ ಸಂಘಟನೆಗಳು, ಮಠಾಧೀಶರು, ಪತ್ರಕರ್ತರು, ಗೃಹಿಣಿಯರು, ಕಾಲೇಜು ವಿದ್ಯಾರ್ಥಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಂಜಿನ ಮೆರವಣಿಗೆಯು ಸಂಜೆ 5:30ಕ್ಕೆ ಕುವೆಂಪು ರಂಗಮಂದಿರದಿಂದ ಆರಂಭವಾಗುವ ಈ ಮೆರವಣಿಗೆ ಬಸವೇಶ್ವರ ವೃತ್ತ, ವೀರಭದ್ರೇಶ್ವರ ಟಾಕೀಸ್ ರಸ್ತೆ, ಬಿಎಚ್ ರಸ್ತೆ ಮೂಲಕ ಬಸ್ ನಿಲ್ದಾಣ ತಲುಪಿ ಮತ್ತೆ ಅಲ್ಲಿಂದ ಎಎ ಸರ್ಕಲ್ ಮೂಲಕ ಗೋಪಿ ವೃತ್ತ ತಲುಪಲಿದೆ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಕೆ.ಪಿ. ಶ್ರೀಪಾಲ್, ಗುರುಮೂರ್ತಿ, ಎಂ.ಆರ್. ಅನಿಲ್, ಶಾಂತಾ ಸುರೇಂದ್ರ, ಶಿವಕುಮಾರ್, ಜಿ.ಡಿ. ಮಂಜುನಾಥ್, ತ್ಯಾಗರಾಜ್, ಮಹಮ್ಮದ್ ಗೌಸ್ ಸೇರಿದಂತೆ ಹಲವರಿದ್ದರು.







