ಬಿಜೆಪಿ ಚಿಂತನೆಗೂ ಸ್ವಾಮಿ ವಿವೇಕಾನಂದರ ಚಿಂತನೆಗೂ ಅಜಗಜಾಂತರ ವ್ಯತ್ಯಾಸವಿದೆ: ವಿ.ಎಸ್.ಉಗ್ರಪ್ಪ
ಮೋದಿ ಭಾಷಣವನ್ನು ವಿದ್ಯಾರ್ಥಿಗಳು ಕೇಳುವ ಅವಶ್ಯಕತೆ ಇಲ್ಲ

ಬೆಂಗಳೂರು, ಸೆ.11: ಜಾತಿ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಸಂಘ ಪರಿವಾರ, ಬಿಜೆಪಿ ಚಿಂತನೆಗೂ ಹಾಗೂ ವೈಚಾರಿಕ ಮನೋಭಾವವುಳ್ಳ ಸ್ವಾಮಿ ವಿವೇಕಾನಂದರ ಚಿಂತನೆಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ, ದೇಶದ ಎಲ್ಲ ವಿವಿಗಳಲ್ಲಿ ಕಡ್ಡಾಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ಯುಜಿಸಿ ಆದೇಶ ಹೊರಡಿಸಿರುವುದು ಸಮಂಜಸವಲ್ಲ ಎಂದು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಸೋಮವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೊದಲು ರಾಮ ಜನ್ಮಭೂಮಿ ನಿರ್ಮಾಣ, ಗೋ ಮಾಂಸ ಸೇವನೆ ಬಗ್ಗೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿ ಆಮೇಲೆ ಸ್ವಾಮಿ ವಿವೇಕಾನಂದರ ಚಿಂತನೆ ಹಾಗೂ ವೈಚಾರಿಕತೆಯ ಬಗ್ಗೆ ಮಾತನಾಡಲಿ. ಆದರೆ, ಮೋದಿ ಅವರು ತಮ್ಮ ಚಿಂತನೆಯ ನಿಲುವನ್ನು ತಿಳಿಸದೆ ವಿವಿಗಳು ಕಡ್ಡಾಯವಾಗಿ ಭಾಷಣ ಕೇಳಬೇಕೆಂಬ ಆದೇಶವನ್ನು ಹೊರಡಿಸಬಾರದು ಎಂದು ಹೇಳಿದರು.
ದೀನ ದಯಾಳ್ ಜನ್ಮ ಶತಾಬ್ಧಿ, ಸ್ವಾಮಿ ವಿವೇಕಾನಂದ ಚಿಕಾಗೋ ವಿಶ್ವಧರ್ಮ 125ನೆ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಕೇಳಲು ಕಡ್ಡಾಯಗೊಳಿಸಿ ಯುಜಿಸಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮೋದಿ ಅವರ ಭಾಷಣವನ್ನು ವಿವಿ ವಿದ್ಯಾರ್ಥಿಗಳು ಕೇಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.





