ದಂಡುಪಾಳ್ಯದ ಐವರು ಆರೋಪಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದು
ಬಸವನಗುಡಿ ಮಂಜಳಾ ಕೊಲೆ ಪ್ರಕರಣ
.jpg)
ಬೆಂಗಳೂರು, ಸೆ.11: ಬಸವನಗುಡಿಯಲ್ಲಿ ಮಂಜುಳಾ ಎಂಬ ಗೃಹಿಣಿಯನ್ನು ಹತ್ಯೆಗೈದು, ಆಕೆಯ ಮೈಮೇಲಿನ ಚಿನ್ನಾಭರಣ ಹಾಗೂ ಮನೆಯಲ್ಲಿನ ವಸ್ತುಗಳನ್ನು ದೋಚಿದ್ದ ಆರೋಪದಲ್ಲಿ ಅಧೀನ ನ್ಯಾಯಾಯಲಯದಿಂದ ಗಲ್ಲು ಶಿಕ್ಷೆ ಗುರಿಯಾಗಿದ್ದ ದಂಡುಪಾಳ್ಯದ ಐವರು ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.
ಪ್ರಕರಣ ಸಂಬಂಧ ಗಲ್ಲು ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ಮುನಿಕೃಷ್ಣ, ವೆಂಕಟೇಶ್, ನಲ್ಲತಿಮ್ಮ ಮತ್ತು ಲಕ್ಷ್ಮೀ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಿಭಾಗೀಯ ಪೀಠ ಗಲ್ಲು ಶಿಕ್ಷೆ ರದ್ದುಪಡಿಸಿ ಖುಲಾಸೆಗೊಳಿಸಿದೆ. ಆ ಮೂಲಕ ಗಲ್ಲು ಶಿಕ್ಷೆ ಕಾಯಂಗೊಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ಅರ್ಜಿಯನ್ನು ಪೀಠ ತಿರಸ್ಕರಿಸಿದೆ.
ಆದರೆ, ಕಳವು ಮಾಲುಗಳನ್ನು ಸ್ವೀಕರಿಸಿದ ಹಾಗೂ ತಮ್ಮಲ್ಲಿರಿಸಿಕೊಂಡ ಆರೋಪದಲ್ಲಿ ಮುನಿಕೃಷ್ಣ, ವೆಂಕಟೇಶ ಮತ್ತು ನಲ್ಲತಿಮ್ಮರನ್ನು ತಪ್ಪಿತಸ್ಥರು ಎಂದು ತೀರ್ಮಾನಿಸಿ, ಅವರಿಗೆ ತಲಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ಆರೋಪಿಗಳು ಹಲವು ವರ್ಷಗಳು ಜೈಲು ವಾಸ ಅನುಭವಿಸಿರುವುದರಿಂದ ಬೇರೆ ಪ್ರಕರಣದಲ್ಲಿ ಅವರ ಬಂಧನ ಅಗತ್ಯವಿಲ್ಲವಾದರೆ ಬಿಡುಗಡೆ ಮಾಡಬಹುದು ಎಂದು ನ್ಯಾಯಪೀಠ ಸರಕಾರಕ್ಕೆ ತಿಳಿಸಿದೆ.
ಇದೇ ವೇಳೆ ಪ್ರಕರಣದ ಮೊದಲ ಆರೋಪಿ ದೊಡ್ಡ ಹನುಮ, ತನಗೆ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದತಿಗಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸದಿದ್ದರೂ, ಇದೇ ಆದೇಶ ಆತನಿಗೂ ಅನ್ವಯವಾಗಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ. ಅದರಂತೆ ಆತನೂ ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾನೆ. ಈ ಮಧ್ಯೆ ದಂಡು ಪಾಳ್ಯದ ಆರೋಪಿಗಳ ವಿರುದ್ಧ ಇನ್ನು ಕೆಲ ಪ್ರಕರಣಗಳು ವಿಲೇವಾರಿಗೆ ಬಾಕಿಯಿರುವುದರಿಂದ ಅವರಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ.
ಬಸವನಗುಡಿಯಲ್ಲಿ 2000ರ ಅ.22ರಂದು ಮಂಜುಳಾ ಎಂಬ ಗೃಹಿಣಿಯನ್ನು ಹತ್ಯೆ ಮಾಡಿ, ಆಕೆಯ ಮೇಲಿನ ಚಿನ್ನದ ಸರ, ನಾಲ್ಕು ಬಳೆ ಹಾಗೂ ಮನೆಯಲ್ಲಿನ ಇತರೆ ವಸ್ತು ದೋಚಿದ ಆರೋಪ ಸಂಬಂಧ ದಂಡುಪಾಳ್ಯದ ಈ ಐವರನ್ನು ದೋಷಿಗಳು ಎಂದು ತೀರ್ಮಾನಿಸಿದ್ದ 34ನೆ ಹೆಚ್ಚುವರಿ ನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅವರಿಗೆ ಗಲ್ಲು ಶಿಕ್ಷೆ ವಿಧಿಸಿ 2011ರ ಎ.7ರಂದು ಆದೇಶಿಸಿತ್ತು.
ಆದರೆ, ಮಂಜುಳಾ ಅವರನ್ನು ಕೊಲೆ ಮಾಡಿದ ದರೋಡೆ ಮಾಡಿರುವುದಕ್ಕೆ ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಆದರೆ, ಕಳವು ವಸ್ತುಗಳನ್ನು ಮುನಿಕೃಷ್ಣ, ವೆಂಕಟೇಶ ಮತ್ತು ನಲ್ಲತಿಮ್ಮ ತಮಗೆ ಮಾರಾಟ ಮಾಡಿದ್ದರು ಎಂದು ಚಿನ್ನಾಭರಣ ವ್ಯಾಪಾರಿ ಜನಾರ್ದನ ಶೆಟ್ಟಿ ಎಂಬಾತ ಹೇಳಿದ್ದ. ಇದನ್ನು ಆಧರಿಸಿ ಈ ಮೂವರಿಗೆ ತಲಾ ಮೂರು ವರ್ಷ ಜೈಲು ವಿಧಿಸಲಾಗಿದೆ.







