ವರದಿಗಾರನ ಬಂಧನದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಪ್ರೊ.ಹುಲ್ಕೆರೆ ಮಹದೇವ

ಮಂಡ್ಯ, ಸೆ.11: ವಾರ್ತಾಭಾರತಿ ಪತ್ರಿಕೆಯ ಬಂಟ್ವಾಳ ವರದಿಗಾರನನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ಇಂತಹ, ಬೆಳವಣಿಗೆಗಳು ನಡೆಯುತ್ತಿದ್ದರೂ, ಸಿದ್ದರಾಮಯ್ಯ ಅವರ ಸರಕಾರ ಗಂಭೀರವಾಗಿ ಪರಿಗಣನೆ ಮಾಡದಿರುವುದು ನಮ್ಮಂತಹವರಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳದ ವಾರ್ತಾಭಾರತಿಯ ವರದಿಗಾರ ಗುರುತರವಾದ ಪ್ರಮಾದವೇನನ್ನೂ ಮಾಡಿಲ್ಲವೆಂಬುದು ವರದಿಗಳಿಂದ ತಿಳಿದುಬರುತ್ತದೆ. ತಮ್ಮ ಬಗ್ಗೆ ಬರೆದರೆಂಬ ಕಾರಣವೊಂದಕ್ಕೇ ಪೊಲೀಸರು ಅವರನ್ನು ಬಂಧಿಸಿರುವ ಕ್ರಮ ಸಾರ್ವತ್ರಿಕ ಖಂಡನೀಯ ಎಂದಿದ್ದಾರೆ.
ಪ್ರಗತಿಪರ ಆಲೋಚನೆ, ಚಿಂತನೆ, ವಾಸ್ತವದ ಚಿತ್ರಣ, ಸಮಾಜಮುಖಿ ವಿಚಾರಗಳಿಗೆ ವಾರ್ತಾಭಾರತಿ ಧನಿಯಾಗಿ ರೂಪುಗೊಳ್ಳುತ್ತಿರುವ ವಿಶಿಷ್ಟ ಪತ್ರಿಕೆಯಾಗಿ ಹೊರಹೊಮ್ಮಿದೆ. ಇಂತಹ ಪತ್ರಿಕೆಯ ವರದಿಗಾರನನ್ನು ಪೊಲೀಸರು ಬಂಧಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಂಧನಕ್ಕೂ ಒಂದು ನೀತಿ, ರೀತಿ ಇದೆ. ಅದನ್ನು ಅನುಸರಿಸದೆ ನಡೆದುಕೊಂಡಿರುವ ಪೊಲೀಸರ ಕ್ರಮ ಸರಿಯಲ್ಲ. ಪತ್ರಕರ್ತನ ವಿರುದ್ಧ ಆರೋಪಗಳಿದ್ದರೆ, ಕಾನೂನು ಮಾರ್ಗದಲ್ಲಿ ತನಿಖೆಯಾಗಲಿ. ಅದನ್ನು ಬಿಟ್ಟು ಏಕಾಏಕಿ ಪ್ರಕರಣವನ್ನು ದಾಖಲಿಸಿ ಬಂಧನ ಮಾಡಿರುವುದು ಸರಿಯಲ್ಲ. ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವರದಿಗಾರನ ವಿರುದ್ಧ ಇರುವ ಪ್ರಕರಣವನ್ನು ಹಿಂಪಡೆದು ಬಿಡುಗಡೆ ಮಾಡಬೇಕು ಎಂದು ಚಿಂತಕ ಪ್ರೊ.ಹುಲ್ಕೆರೆ ಮಹದೇವ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







