ಕೋಮುವಾದಿಗಳು ಗೌರಿ ಹತ್ಯೆ ತನಿಖೆಯ ದಿಕ್ಕು ತಪ್ಪಿಸಲು ಹೊರಟಿದ್ದಾರೆ: ಉಜ್ಜನಿಗೌಡ

ಮಂಡ್ಯ, ಸೆ.11: ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆಯನ್ನು ನಕ್ಸಲೀಯರು ಮಾಡಿದ್ದಾರೆಂದು ಪ್ರಚಾರ ಮಾಡುವುದರ ಮೂಲಕ ಹಿಂದೂ ಕೋಮುವಾದಿಗಳು ತನಿಖೆಯ ದಿಕ್ಕು ತಪ್ಪಿಸುವ ಸಂಚು ರೂಪಿಸಲು ಹೊರಟಿದ್ದಾರೆ ಎಂದು ಮಾಜಿ ನಕ್ಸಲ್ ಕಾರ್ಯಕರ್ತ ಉಜ್ಜನಿಗೌಡ ಕಿಡಿಕಾರಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಅವರನ್ನು ನಕ್ಸಲೀಯರು ಕೊಲ್ಲಲು ಕಾರಣವೇನೂ ಇಲ್ಲ. ಗೌರಿ ಅವರು ಹೋರಾಡಿದ್ದು ಹಿಂದೂ ಕೋಮುವಾದಿ ಫ್ಯಾಶಿಸ್ಟರ ವಿರುದ್ಧವೇ ಹೊರತು ನಕ್ಸಲೀಯರ ವಿರುದ್ಧವಲ್ಲ. ಗೌರಿಯವರ ಸೈದ್ಧಾಂತಿಕ ಹೋರಾಟವು ಕೋಮುವಾದಿ ಫ್ಯಾಶಿಸ್ಟರಿಗೆ ಸವಾಲಾಗಿ ಪರಿಣಮಿಸಿತ್ತೆ ಹೊರತು ಸಕ್ಸಲೀಯರಿಗಲ್ಲ ಎಂದು ಸ್ಪಷ್ಟಪಡಿಸಿದರು.
ದಾಭೋಲ್ಕರ್, ಪೆನ್ಸಾರೆ ಹಾಗೂ ಡಾ.ಎಂ.ಎಂ. ಕಲ್ಬುರ್ಗಿಯವರ ಕೊಲೆಗೂ ಗೌರಿಯವರ ಕೊಲೆಗೂ ಸಾಮ್ಯತೆಯಿದೆ ಎಂದು ತನಿಖಾ ಸಂಸ್ಥೆಗಳು ಹೇಳುತ್ತಿವೆ. ಹಾಗಾದರೆ ಈ ಎಲ್ಲಾ ಕೊಲೆಗಳನ್ನು ನಕ್ಸಲೀಯರೇ ಮಾಡಿದ್ದಾರೆಂದು ಫ್ಯಾಶಿಸ್ಟರು ಹೇಳಲು ಸಾಧ್ಯವೇ? ಜನಪರ. ಸಮಾಜಮುಖಿ, ಪ್ರಗತಿಪರ ಚಿಂತಕರನ್ನು ದೇಶದ ನಿರ್ಮಾತರೆಂದು ಬಗೆಯುವ ಮಾವೋವಾದಿಗಳಿಗೆ ಪ್ರಗತಿಪರರನ್ನು ಕೊಲ್ಲುವುದರಿಂದ ಲಾಭವೇನೆಂದು ಕೋಮುವಾದಿ ಫ್ಯಾಶಿಸ್ಟರು ಜನರಿಗೆ ಉತ್ತರಿಸಬೇಕಾಗುತ್ತದೆ ಎಂದು ಒತ್ತಾಯಿಸಿದರು.
ಗೌರಿಯರವರ ಈ ಧ್ವನಿ ಕೇವಲ ಕರ್ನಾಟಕಕ್ಕೆ ಸೀಮಿತಗೊಳ್ಳದೆ ಉತ್ತರ ಭಾರತದ ದಿಕ್ಕಿನಲ್ಲೂ ಹೊರಟಿ ಗುರಜಾತ್, ದಿಲ್ಲಿವರೆಗೂ ಮುಟ್ಟಿ ಅಲ್ಲಿನ ಫ್ಯಾಶಿಸ್ಟ್ ವಿರೋಧಿ ಹೋರಾಟಗಳಿಗೂ ಒತ್ತಾಸೆಯಾಗಿತ್ತು. ಇಂತಹ ಕಾಲಘಟ್ಟದಲ್ಲಿ ಗೌರಿಯವರ ಕಗ್ಗೊಲೆ ನಡೆದಿದೆ. ಇಂತಹ ಕಾಲಘಟ್ಟದಲ್ಲಿ ಗೌರಿಯವರು ಕೊಲೆ ನಡೆದಿದ್ದು, ನಾಡ, ದೇಶದ, ಜಗತ್ತಿನ ಪ್ರಜಾತಂತ್ರವಾದಿಗಳು ಒಂದಾಗಿ ದನಿ ಎತ್ತುವ ಮೂಲಕ ಫ್ಯಾಶಿಸ್ಟರ ಸಂಚುಗಳನ್ನು ಬಯಲಿಗೆಳೆಯಬೇಕು. ಸರಕಾರ ಕೊಲೆಗೆಡುಕರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದರು.
ರೈತಸಂಘದ ಮುಖಂಡ ಶಂಭೂನಹಳ್ಳಿ ಸುರೇಶ್ ಮತ್ತು ಪ್ರಗತಿಪರ ಹೋರಾಟಗಾರ ಲಕ್ಷ್ಮಣ್ ಚೀರನಹಳ್ಳಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







