ಎಐಎಡಿಎಂಕೆ ಸಾಮಾನ್ಯ ಸಭೆ ತಡೆ ಕೋರಿದ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ, ಸೆ. 11: ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಆಯೋಜಿಸಿದ ಏಕೀಕೃತ ಎಐಎಡಿಎಂಕೆಯ ಸಾಮಾನ್ಯ ಮಂಡಳಿ ಸಭೆಯನ್ನು ತಡೆಯುವಂತೆ ಕೋರಿ ಬಂಡಾಯ ಶಾಸಕ ಸಲ್ಲಿಸಿದ ಅರ್ಜಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ಇದರಿಂದ ಟಿಟಿವಿ ದಿನಕರನ್ ಬಣಕ್ಕೆ ಪ್ರಮುಖ ಹಿನ್ನಡೆ ಉಂಟಾಗಿದೆ. ಇದಲ್ಲದೆ, ದಿನಕರನ್ ಅವರ ವಿಶ್ವಾಸಾರ್ಹ ಬೆಂಬಲಿಗರು ಹಾಗೂ ಪೆರಂಬೂರು ಶಾಸಕ ದೂರುದಾರ ಪಿ. ವೆಟ್ರಿವೇಲು ಅವರಿಗೆ ನ್ಯಾಯಾಲಯ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ನ್ಯಾಯಾಲಯ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಗೆ ಅನುಗುಣವಾಗಿ ಮುಖ್ಯ ನ್ಯಾಯಮೂರ್ತಿ ಅನುಮತಿ ಪಡೆಯದೆ ಶಾಸಕರು ಹಾಗೂ ಸಚಿವರ ವಿರುದ್ಧ ಶಾಸಕರೊಬ್ಬರು ಮೊಕದ್ದಮೆ ದಾಖಲಿಸಲು ಹೇಗೆ ಸಾಧ್ಯವಾಯಿತು ಎಂದು ಹೇಳಿದ ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್ ಶಾಸಕ ವೆಟ್ರಿವೇಲು ಅವರನ್ನು ತರಾಟೆಗೆ ತೆಗೆದುಕೊಂಡರು. ಅವರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ಹೇಳಿರುವ ನ್ಯಾಯಮೂರ್ತಿ, ವೈಯುಕ್ತಿಕ ವಿಷಯಗಳಿಗೆ ಸಂಬಂಧಿಸಿ ಇಂತಹ ಮೊಕದ್ದಮೆ ದಾಖಲಿಸಲು ಶಾಸಕರಿಗೆ ಅವಕಾಶ ನೀಡಬಾರದು ಎಂದಿದ್ದಾರೆ.





