ಹನೂರು: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಹನೂರು, ಸೆ.11: ತಮ್ಮ ಕರ್ತವ್ಯ ಜೂತೆಗೆ ಅರಣ್ಯ ಸಂರಕ್ಷಣೆ, ಸ್ಥಳೀಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದ ಡಿಸಿಎಫ್ ಶ್ರೀನಿವಾಸ್ ಅವರ ವ್ಯಕ್ತಿತ್ವ ಇಂದಿನ ಅಧಿಕಾರಿಗಳಿಗೆ ಮಾದರಿ ಎಂದು ಸಿಸಿಎಫ್ ವಿಜಯ್‍ಲಾಲ್ ಮೀನಾ ತಿಳಿಸಿದರು.
ಕಾವೇರಿ ವನ್ಯಜೀವಿಧಾಮದ ಎರಕೆಯಂ ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯ ಇಲಾಖೆಯಲ್ಲಿ ಡಿಸಿಎಫ್ ಶ್ರೀನಿವಾಸ್ ಅವರ ಹೆಸರು ಅಜರಾಮರವಾಗಿ ಉಳಿಯಲಿದೆ. ಇಲಾಖೆಯಲ್ಲಿ ಇದ್ದಷ್ಟು ದಿನವೂ ಇತರರಿಗೆ ಮಾದರಿಯಾಗಿದ್ದ ಅವರು ತಮ್ಮ ಕರ್ತವ್ಯದ ಜೊತೆಗೆ ಗೋಪಿನಾಥಂ ಗ್ರಾಮದ ಜನತೆಗೂ ಸಹಾಯ ಮಾಡುವ ಮೂಲಕ ಇಲ್ಲಿನ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಇಂದಿನ ಸಿಬ್ಬಂದಿಗಳು ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಡಿಸಿಎಫ್ ರಮೇಶ್‍ಕುಮಾರ್ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದೇ ಹೆಮ್ಮೆಯ ಸಂಗತಿ. ಅರಣ್ಯ ಇಲಾಖೆಗೆ ಸೇರ್ಪಡೆಯಾಗುವ ಯುವಕರ ಸಂಖ್ಯೆ ಹೆಚ್ಚಾಗಬೇಕು. ನಮ್ಮ ವಸ್ತುಗಳೆಂದು ಇತರೆ ವಸ್ತುಗಳನ್ನು ಜೋಪಾನ ಮಾಡುವ ಹಾಗೇ ಅರಣ್ಯವೂ ಸಹ ನಮ್ಮದೇ ಎಂದು ಭಾವಿಸಿ ಅದರ ರಕ್ಷಣೆಗೆ ಮುಂದಾಗಬೇಕು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯೆ ಶಶಿಕಲಾ, ಗೋಪಿನಾಥಂ ಗ್ರಾಪಂ ಅಧ್ಯಕ್ಷ ಗೋವಿಂದರಾಜು, ಡಿಸಿಎಫ್ ಮಾಲತಿಪ್ರಿಯಾ, ಎಸಿಎಫ್‍ಗಳಾದ ಅಂಕರಾಜು, ಶಿವರಾಮಯ್ಯ, ಆರ್‍ಎಫ್‍ಓಗಳಾದ ಲೋಕೇಶ್‍ಮೂರ್ತಿ, ಬಿ.ಸಿ. ಲೋಕೇಶ್, ಸುಂದರ್, ಶಂಕರ್ ಅಂತರಗಟ್ಟಿ, ಸಯ್ಯಾದ್ ಸಬಾ ನದಾಫ್, ರಾಜೇಶ್ ಗವಾಲ್, ಜಯವರ್ಧನ ತಳ್ವಾರ್, ಗ್ರಾಮದ ಮುಖಂಡರು ಹಾಗೂ ವಿದ್ಯಾರ್ಥಿಗಳು ಇದ್ದರು.







