ಎಚ್.ಎಸ್.ದೊರೆಸ್ವಾಮಿ ಸೇರಿ 16 ಜನರಿಗೆ ಪೊಲೀಸ್ ಭದ್ರತೆ

ಬೆಂಗಳೂರು, ಸೆ.11: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬೆನ್ನಲ್ಲೇ ಹಿರಿಯ ಸಾಹಿತಿಗಳು ಸೇರಿದಂತೆ 16 ಜನರಿಗೆ ಪೊಲೀಸ್ ಭದ್ರತೆ ಒದಗಿಸಿ ಗೃಹ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಡಾ.ಸಿ.ಎಸ್.ದ್ವಾರಕಾನಾಥ್, ಪ್ರೊ.ಕೆ.ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಡಾ.ಸಿದ್ದಲಿಂಗಯ್ಯ, ಡಾ.ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ.ಜಾಮದಾರ್, ಚಿತ್ರನಿರ್ದೇಶಕ ಟಿ.ಎನ್.ಸೀತಾರಾಂ, ಹೋರಾಟಗಾರ್ತಿ ಕೆ.ಎಸ್.ವಿಮಲಾ, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಬಿ.ಗೋಪಾಲ್ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ಅದೇ ರೀತಿ, ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರ ಅಂಗರಕ್ಷಕ ಭದ್ರತೆಯನ್ನು ಮುಂದುವರಿಸಲಾಗಿದೆ ಎಂದು ಗೃಹ ಇಲಾಖೆ ಪ್ರಕಟನೆ ತಿಳಿಸಿದೆ.





