ಕೃಷ್ಣಾಷ್ಟಮಿಗೆ ಗಮನ ಸೆಳೆಯಲಿರುವ ‘ಮಾರಿಕಾಡು ವೇಷ’

ಉಡುಪಿ, ಸೆ.11: ಕಳೆದ ನಾಲ್ಕು ವರ್ಷಗಳಿಂದ ಕೃಷ್ಣಾಷ್ಟಮಿಯ ಸಂದರ್ಭ ನಾಗಸಾಧು, ಮಾಯಾನ್ ಸಂಸ್ಕೃತಿ, ತೈಯಂ ಹಾಗೂ ಅಪಕಲಿಪ್ಟೋ ವೇಷಗಳನ್ನು ಧರಿಸಿ ಗಮನ ಸೆಳೆದಿದ್ದ ನಮ್ಮ ಭೂಮಿಯ ರಾಮಾಂಜಿ ಈ ಬಾರಿಯ ಕೃಷ್ಣಾ ಷ್ಟಮಿಗೆ ಮಾರಿಕಾಡು ವೇಷವನ್ನು ಧರಿಸಲಿದ್ದು, ಈ ವೇಳೆ ಸಾರ್ವಜನಿಕರಿಂದ ಸಂಗ್ರಹವಾಗುವ ಹಣವನ್ನು ಕೊರಂಗ್ರಪಾಡಿಯ ಕಲ್ವಾರಿ ವೃದ್ಧಾಶ್ರಮಕ್ಕೆ ನೀಡಲು ನಿರ್ಧರಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕದಲ್ಲಿ ಬರುವ ಮಾಟಗಾತಿಯರನ್ನು ಡಾ.ಚಂದ್ರಶೇಖರ ಕಂಬಾರರು ಮಾರಿಕಾಡು ಎಂಬುದಾಗಿ ಕನ್ನಡದಲ್ಲಿ ರೂಪಾಂತರಿಸಿದ್ದಾರೆ. ಪ್ರಕೃತಿ ಮತ್ತು ಮನುಷ್ಯನ ವಿರುದ್ಧವಾಗಿ ಈ ಮಾರಿಕಾಡು ನನಗೆ ಕಾಣಿಸಿದೆ. ಬುಡಮೇಲಾದ ಕಾಡುಗಳು ಎಂಬ ಅರ್ಥ ಬಿಂಬಿಸುವ ಇದು ವಿನ್ಯಾಸದ ದೃಷ್ಠಿಯಿಂದ ಆಕರ್ಷಣೀಯವಾಗಿದೆ ಎಂದರು.
ಇದು ಪ್ರಶಾಂತ್ ಉದ್ಯಾವರ ಅವರ ಪರಿಕಲ್ಪನೆ ಮತ್ತು ವಿನ್ಯಾಸವಾಗಿದ್ದು, ಇವರಿಗೆ ಭುವನ್ ಮಣಿಪಾಲ ಸಹಕಾರ ನೀಡಲಿದ್ದಾರೆ. ಈ ವೇಷ ಹಾಕಲು 25 ಸಾವಿರ ರೂ. ವೆಚ್ಚವಾಗಲಿದ್ದು, ಸಾರ್ವಜನಿಕರಿಂದ ಸಂಗ್ರಹವಾದ ಹಣವನ್ನು ಕಲ್ವಾರಿ ವೃದ್ಧಾಶ್ರಮಕ್ಕೆ ನೀಡಲಾಗುವುದು. ಹಿತೈಷಿಗಳು ಸಿಂಡಿಕೇಟ್ ಬ್ಯಾಂಕ್ ಕುಂಜಿಬೆಟ್ಟು ಶಾಖೆ ಖಾತೆ ನಂಬರ್ 0186220042226ಗೆ ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ-8105134893ಗೆ ಸಂಪರ್ಕಿಸ ಬಹುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿತ್ಯಾನಂದ ಒಳಕಾಡು, ರೋಹಿತ್ ಉಪಸ್ಥಿತರಿದ್ದರು.







