ಸಾಹಿತಿ ಕಾಂಚ ಐಲಯ್ಯಗೆ ಜೀವಬೆದರಿಕೆ

ಹೈದರಾಬಾದ್, ಸೆ.11: ಅನಾಮಧೇಯ ವ್ಯಕ್ತಿಗಳಿಂದ ಜೀವಬೆದರಿಕೆ ಕರೆ ಬಂದಿರುವುದಾಗಿ ಸಾಹಿತಿ, ಬುದ್ಧಿಜೀವಿ ಡಾ ಕಾಂಚ ಐಲಯ್ಯ ಹೈದರಾಬಾದ್‌ನ ಒಸ್ಮಾನಿಯಾ ವಿವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿನ್ನೆಯಿಂದ ಹಲವಾರು ಅನಾಮಧೇಯ ಕರೆಗಳು ಬಂದಿದ್ದು ಕರೆ ಸ್ವೀಕರಿಸಿದಾಗ ನನ್ನನ್ನು ಬೈದಿದ್ದಾರೆ. ನನ್ನ ಲೇಖನದ ಬಗ್ಗೆ ಅಸಾಮಧಾನಗೊಂಡಿದ್ದ ಅಂತರಾಷ್ಟ್ರೀಯ ಆರ್ಯ-ವೈಶ್ಯ ಸಂಘದ ಮುಖ್ಯಸ್ಥ ಕೆ.ರಾಮಕೃಷ್ಣ ಟಿ.ವಿ.ಚಾನೆಲ್‌ವೊಂದರಲ್ಲಿ ಖಂಡಿಸಿದ್ದರು. ಅಲ್ಲದೆ ಕೆಲವರು ನನ್ನ ನಾಲಿಗೆ ಕತ್ತರಿಸುವುದಾಗಿ ಬೆದರಿಸಿದ್ದರು. ನನ್ನ ಪ್ರತಿಕೃತಿಯನ್ನೂ ಸುಡಲಾಗಿದೆ. ಅವರ ವಾಚಾಮಗೋಚರ ಬೈಗಳು, ಫೋನ್ ಕರೆ ಹಾಗೂ ಸಂದೇಶಗಳು ನನ್ನನ್ನು ದಿಗಿಲುಗೊಳಿಸಿವೆ. ನನಗೆ ಏನಾದರೂ ಆದರೆ ಅದಕ್ಕೆ ಇವರೇ ಹೊಣೆಗಾರರು ಎಂದು ಐಲಯ್ಯ ತಿಳಿಸಿದ್ದಾರೆ.
ಡಾ ಕಾಂಚ ಐಲಯ್ಯ ಬರೆದಿರುವ ‘ವೈಶ್ಯರು ಸಾಮಾಜಿಕ ಸ್ಮಗ್ಲರ್‌ಗಳು’ ಎಂಬ ಕೃತಿಯ ಕುರಿತು ತೀವ್ರ ಅಸಮಾಧಾನಗೊಂಡಿದ್ದ ವೈಶ್ಯ ಸಂಘಟನೆಗಳು, ಈ ಕೃತಿಯಲ್ಲಿರುವ ಕೆಲವು ವಿಷಯಗಳು ವೈಶ್ಯ ಸಮುದಾಯದ ಹೆಸರು ಕೆಡಿಸುವ , ಅಪಮಾನಗೊಳಿಸುವ ಕಾರಣ ಈ ಕೃತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದವು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಆಂಧ್ರಪ್ರದೇಶ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ಜೆ.ವೆಂಕಟೇಶ್ವರ್, ಐಲಯ್ಯ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ತಿಳಿಸಿದ್ದರು.







