ಇಸ್ರೇಲ್‌ನಲ್ಲಿ ಚಿತ್ರೀಕರಣ: ಲೆಬನೀಸ್ ಚಿತ್ರ ನಿರ್ದೇಶಕನನ್ನು ವಶಕ್ಕೆ ಪಡೆದ ಪೊಲೀಸರು

ಬೆರೂತ್ (ಲೆಬನಾನ್), ಸೆ. 11: ಬೆರೂತ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಫ್ರೆಂಚ್-ಲೆಬನೀಸ್ ನಿರ್ದೇಶಕ ಝಿಯಾದ್ ಡೊವೇರಿಯನ್ನು ಸ್ವಲ್ಪಕಾಲ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರು ಸೋಮವಾರ ಸೇನಾ ನ್ಯಾಯಾಲಯವೊಂದರಲ್ಲಿ ಹಾಜರಾಗಬೇಕಾಗಿದೆ.
ತನ್ನ ಹೊಸ ಚಿತ್ರ ‘ದ ಇನ್ಸಲ್ಟ್’ನ ಪ್ರೀಮಿಯರ್‌ಗಾಗಿ ಅವರು ರವಿವಾರ ಲೆಬನಾನ್‌ಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಈ ಚಿತ್ರದ ಫೆಲೆಸ್ತೀನಿಯನ್ ನಟ ಕಾಮಿಲ್ ಅಲ್ ಬಾಶಾ ವೆನಿಸ್ ಚಿತ್ರೋತ್ಸವದಲ್ಲಿ ಶ್ರೇಷ್ಠ ನಟನಿಗಾಗಿರುವ ‘ವೊಲ್ಪಿ ಕಪ್’ ಪ್ರಶಸ್ತಿ ಗೆದ್ದಿದ್ದಾರೆ.
‘‘ಅವರು ನನ್ನನ್ನು ಎರಡೂವರೆ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ವಶದಲ್ಲಿರಿಸಿಕೊಂಡರು. ನನ್ನ ಫ್ರಾನ್ಸ್ ಮತ್ತು ಲೆಬನಾನ್ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡ ಬಳಿಕ ಅವರು ನನ್ನನ್ನು ಬಿಡುಗಡೆಗೊಳಿಸಿದರು’’ ಎಂದು ಡೊವೇರಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಅವರು ತನ್ನ ಹಿಂದಿನ ಚಿತ್ರ ‘ದಿ ಅಟ್ಯಾಕ್’ನ ಸ್ವಲ್ಪ ಭಾಗವನ್ನು ಇಸ್ರೇಲ್‌ನಲ್ಲಿ ಚಿತ್ರಿಸಿದ್ದರು. ತನ್ನ ಪ್ರಜೆಗಳು ಇಸ್ರೇಲ್‌ಗೆ ಹೋಗುವುದನ್ನು ಲೆಬನಾನ್ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.







