ನಾಳೆಯಿಂದ ಕೊರಿಯಾ ಸೂಪರ್ ಬ್ಯಾಡ್ಮಿಂಟನ್ ಸಿರೀಸ್
►ಪಿ.ವಿ. ಸಿಂಧು ಭಾರತ ತಂಡದ ನೇತೃತ್ವ ►ಸೈನಾ ನೆಹ್ವಾಲ್, ಕೆ.ಎ. ಶ್ರೀಕಾಂತ್ ಅಲಭ್ಯ

ಸಿಯೋಲ್, ಸೆ.11:ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಭಾರತದ ಪಿ.ವಿ. ಸಿಂಧು ಅವರು ಮಂಗಳವಾರ ಇಲ್ಲಿ ಆರಂಭಗೊಳ್ಳಲಿರುವ ಕೊರಿಯಾ ಸೂಪರ್ ಸಿರೀಸ್‌ನಲ್ಲಿ ಭಾರತದ ಪಿ.ವಿ. ಸಿಂಧು ಅವರು ಮಹಿಳೆಯರ ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಕೊರಿಯಾ ಸೂಪರ್ ಸಿರೀಸ್‌ನ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ದೂರ ಉಳಿಯಲು ನಿರ್ಧರಿಸಿದ್ದಾರೆ. ಸೈನಾ ಮತ್ತು ಶ್ರೀಕಾಂತ್ ಅವರು ಮುಂದಿನ ವಾರ ಆರಂಭಗೊಳ್ಳಲಿರುವ ಜಪಾನ್ ಓಪನ್‌ನಲ್ಲಿ ಭಾಗವಹಿಸಲು ತಯಾರಿ ನಡೆಸಲು ಕೊರಿಯಾ ಓಪನ್‌ನಿಂದ ದೂರ ಉಳಿಯಲಿದ್ದಾರೆ .
ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚು ಮತ್ತು ಒಂದು ಬೆಳ್ಳಿ ಜಯಿಸಿರುವ ಸಿಂಧು ಅವರು ಕೊರಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆಲಲ್ಲು ಪ್ರಯತ್ನ ನಡೆಸಲಿದ್ದಾರೆ.
ಎಸ್.ಕೆ.ಹ್ಯಾಂಡ್‌ಬಾಲ್ ಸ್ಟೇಡಿಯಂನಲ್ಲಿ ಸಿಂಧು ಅವರು ಮೊದಲ ಪಂದ್ಯದಲ್ಲಿ ಹಾಂಕಾಂಗ್‌ನ ಚಿಯಾಂಗ್ ಎನ್‌ಗನ್ ಯಿ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಯುಎಸ್ ಓಪನ್ ಗ್ರಾನ್ ಪ್ರಿ ಚಾಂಪಿಯನ್ ಎಚ್‌ಎಸ್ ಪ್ರಣಯ್ ಅವರು ಪ್ರಥಮ ಸುತ್ತಿನಲ್ಲಿ ಹಾಂಕಾಂಗ್‌ನ ಲಾಂಗ್ ಆಂಗುಸ್‌ರನ್ನು ಎದುರಿಸುವರು.
ಸಿಂಗಾಪುರ ಓಪನ್ ಚಾಂಪಿಯನ್ ಬಿ.ಸಾಯ್ ಪ್ರಣೀತ್ ಅವರಿಗೆ ಹಾಂಕಾಂಗ್‌ನ ಯು ಯುನ್ ಸವಾಲು ಎದುರಾಗಲಿದೆ.
ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ಚಾಂಪಿಯನ್ ಸಮೀರ್ ವರ್ಮಾ ಥಾಯ್‌ಲ್ಯಾಂಡ್‌ನ ಟಾನೊನ್‌ಸಾಕ್ ಸಾಯಿನ್‌ಸೊಮ್ಬಾನ್ಸುಕ್‌ರನ್ನು ಎದುರಿಸಲಿದ್ದಾರೆ.
ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್.ಸಿಕ್ಕಿ ರೆಡ್ಡಿ ಅವರು ನಾಲ್ಕನೆ ಶ್ರೇಯಾಂಕದ ಇಂಡೋನೇಷ್ಯಾದ ಪ್ರವೀಣ್ ಜೋರ್ಡನ್ ಮತ್ತು ಡೆಬೈ ಸುಸಾಂತೊ ರನ್ನು ಎದುರಿಸಲಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಅವರು ಎಂಟನೆ ಶ್ರೇಯಾಂಕದ ಥಾಯ್‌ಲೆಂಡ್‌ನ ಪುಟ್ಟಿಟಾ ಸುಪಾಜಿರಾಕುಲ್ ಮತ್ತು ಸಪ್ಸಿರೀ ಟೇರಾಟ್ಟನಾಚೈ ಅವರನ್ನು ಎದುರಿಸುವರು.
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಅರ್ಹತಾ ಸುತ್ತಿನಲ್ಲಿ ಜಯಿಸಿದ ಆಟಗಾರರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್‌ನ ಅರ್ಹತಾ ಸುತ್ತಿನಲ್ಲಿ ಸಾತ್ವಿಕ್‌ಸಾಯ್‌ರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ ಕೊರಿಯಾದ ಜೊಂಗ್ ವೋ ಚೊಯಿ ಮತ್ತು ಹುಯೀ ಟೇ ಕಿಮ್ ಸವಾಲು ಎದುರಾಗಲಿದೆ.







