'ಜನವರಿ ಅಂತ್ಯದೊಳಗೆ 49 ಹೊಸ ತಾಲೂಕು ಅಸ್ತಿತ್ವಕ್ಕೆ' : ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ, ಸೆ. 12: 'ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ 49 ಹೊಸ ತಾಲೂಕುಗಳು ಅಸ್ತಿತ್ವಕ್ಕೆ ಬರಲಿವೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪರವರು ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅರಣ್ಯ ಸಾಗುವಳಿ ಹಕ್ಕುಪತ್ರ ವಿತರಣೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಹಕ್ಕುಪತ್ರಗಳು ಅಧಿಕಾರಿಗಳ ಜೇಬುಗಳಲ್ಲಿದ್ದು, ಅವುಗಳನ್ನು ಸಾಗುವಳಿದಾರರಿಗೆ ತಲುಪಿಸುವ ಕೆಲಸ ನಡೆಸಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿರುವುದು ನಿಜ. ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪರಿಸ್ಥಿತಿಯ ಅವಲೋಕನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ತುಂಗಾ ಏತ ನೀರಾವರಿ ಯೋಜನೆಯಡಿ ನೀರು ಹರಿಸಲು ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲಾ ಯೋಜನಾ ಸಮಿತಿಗೆ ಸಂಬಂಧಿಸಿದಂತೆ ಎರಡು ಸಭೆ ನಡೆಸಲಾಗಿದೆ. 'ನಮ್ಮ ಗ್ರಾಮ - ನಮ್ಮ ಯೋಜನೆ' ಗೆ ಸಂಬಂಧಿಸಿದಂತೆ ಸಮಿತಿಯ ಸದಸ್ಯರಿಗೆ ಮಾಹಿತಿ ರವಾನಿಸುವ ಕೆಲಸ ನಡೆಸಲಾಗಿದೆ. ಹಾಗೆಯೇ ಗ್ರಾ.ಪಂ., ತಾ.ಪಂ., ಮಟ್ಟದಲ್ಲಿಯೂ ಈ ಬಗ್ಗೆ ಸವಿವರವಾದ ಮಾಹಿತಿ ನೀಡಲು ನಿರ್ಧರಿಸಲಾಗಿದೆ.
ಈ ತಿಂಗಳಾಂತ್ಯದೊಳಗೆ ತಾಲೂಕು ಮಟ್ಟದಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು. ಗ್ರಾ.ಪಂ., ತಾ.ಪಂ. ಮಟ್ಟದಲ್ಲಿ ಯೋಜನೆ ತಯಾರಿಸಿ ಕಳುಹಿಸಿ ಕೊಡಲು ಕ್ರಮಕೈಗೊಳ್ಳಲಾಗುವುದು. ಸ್ಥಳೀಯ ಸಂಸ್ಥೆಗಳ ಸದಸ್ಯರುಗಳು ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.







