ನವೆಂಬರ್ ಒಳಗಾಗಿ ಜಿಲ್ಲಾ ಯೋಜನಾ ಸಮಿತಿ ವರದಿ ಸಿದ್ಧ: ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ, ಸೆ. 12: ಮುಂದಿನ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಸಮಗ್ರ ಯೋಜನಾ ವರದಿಯನ್ನು ನವೆಂಬರ್ ಒಳಗಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರಿಗೆ ಆಯೋಜಿಸಲಾಗಿದ್ದ ಜಿಲ್ಲಾ ಯೋಜನಾ ಮುನ್ನೋಟ ಸಿದ್ಧಪಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಯೋಜನೆಗಳನ್ನು ತಳಮಟ್ಟದಿಂದ ರೂಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಮಟ್ಟದಲ್ಲಿ ರಚಿಸಲಾಗಿರುವ ಯೋಜನಾ ಸಮಿತಿಗಳು ಆರಂಭದಲ್ಲಿ ತಮ್ಮ ಹಂತದಲ್ಲಿ ವರದಿ ಸಿದ್ಧಪಡಿಸಬೇಕು. ಬಳಿಕ ತಾಲೂಕು ಮಟ್ಟದಲ್ಲಿ ಆಗಬೇಕಾಗಿರುವ ಯೋಜನಾ ಕಾರ್ಯಕ್ರಮಗಳ ವರದಿಯನ್ನು ಸಿದ್ಧಪಡಿಸಿ ಅಂತಿಮವಾಗಿ ಜಿಲ್ಲಾ ಮಟ್ಟದಲ್ಲಿ ಯೋಜನೆಗಳನ್ನು ಕ್ರೋಡೀಕರಿಸಿ ವರದಿಯನ್ನು ಸಿದ್ಧಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕು ಮಟ್ಟದಲ್ಲಿ ಆಯಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ ಆಯೋಜಿಸಬೇಕು. ಅಕ್ಟೋಬರ್ ತಿಂಗಳಲ್ಲಿ ಎಲ್ಲಾ ತಾಲೂಕುಗಳಿಂದ ವರದಿಯನ್ನು ಪಡೆದುಕೊಳ್ಳಲು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು.
ಯೋಜನಾ ವರದಿ ಕೇವಲ ಪುಸ್ತಕ ಮುದ್ರಣಕ್ಕೆ ಸೀಮಿತವಾಗಬಾರದು. ಯೋಜನೆ ಸಿದ್ಧಪಡಿಸುವಿಕೆಯಲ್ಲಿ ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯವಾಗಿದ್ದು, ಸರ್ಕಾರದ ಮಾರ್ಗಸೂಚಿ ಪ್ರಕಾರ ವರದಿಯನ್ನು ಸಿದ್ಧಪಡಿಸಬೇಕು. ಅಭಿವೃದ್ಧಿ ಕೇವಲ ರಸ್ತೆ, ಚರಂಡಿ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿರದೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಹೊಂದಿರಬೇಕು ಎಂದರು.
ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಉಪನಿರ್ದೇಶಕ ಜಿ.ಎಸ್.ಗಣೇಶ ಪ್ರಸಾದ್ ಅವರು ಯೋಜನಾ ವರದಿ ಸಿದ್ಧಪಡಿಸುವ ಕುರಿತು ಮಾಹಿತಿ ನೀಡಿದರು. ಯೋಜನಾ ವರದಿಯನ್ನು ಸಿದ್ಧಪಡಿಸುವಲ್ಲಿ ಗ್ರಾಮ ಪಂಚಾಯತ್‍ಗಳ ಪಾತ್ರ ಬಹಳ ಮುಖ್ಯವಾಗಿದೆ. ಕುಡಿಯುವ ನೀರು ಪೂರೈಕೆ, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆಗೆ ಪ್ರಥಮ ಆದ್ಯತೆ ನೀಡಬೇಕು. ಬೀದಿ ದೀಪ ಅಳವಡಿಕೆ ಮತ್ತಿತರ ಕಾರ್ಯಗಳಿಗೆ ನಂತರದ ಪ್ರಾಶಸ್ತ್ಯ ನೀಡಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ 116ಅಂಶಗಳನ್ನು ಗುರುತಿಸಲಾಗಿದ್ದು, ಆದ್ಯತೆ ಮೇರೆಗೆ ಇದನ್ನು ನಿರ್ಧರಿಸಬೇಕು ಎಂದು ಹೇಳಿದರು.
ಅಭಿವೃದ್ಧಿಯಲ್ಲಿ 2ನೇ ಸ್ಥಾನ: ಸಮಗ್ರ ಅಭಿವೃದ್ಧಿ ರ್ಯಾಂಕಿಂಗ್‍ನಲ್ಲಿ ರಾಜ್ಯದ 30ಜಿಲ್ಲೆಗಳ ಪೈಕಿ ಶಿವಮೊಗ್ಗ 2ನೇ ಸ್ಥಾನದಲ್ಲಿದೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕ ರ್ಯಾಂಕಿಂಗ್‍ನಲ್ಲಿ ಶಿವಮೊಗ್ಗ 8ನೇ ಸ್ಥಾನದಲ್ಲಿದೆ. ಆಹಾರ ಭದ್ರತೆ ಸೂಚ್ಯಂಕದಲ್ಲಿ 21ನೇ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದ ತಾಲೂಕು ಮಟ್ಟದ ರ್ಯಾಂಕಿಂಗ್‍ನಲ್ಲಿ ಭದ್ರಾವತಿ 17ನೇ ಸ್ಥಾನ, ಹೊಸನಗರ 105, ಸಾಗರ 46, ಶಿಕಾರಿಪುರ 104, ಶಿವಮೊಗ್ಗ 14, ಸೊರಬ 122, ತೀರ್ಥಹಳ್ಳಿ 76ನೇ ಸ್ಥಾನದಲ್ಲಿದೆ. ಜಿಲ್ಲೆಯ ಸಮಗ್ರ ಯೋಜನಾ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸುವಾಗ ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







