ಜೆಡಿಯು ಅಧ್ಯಕ್ಷರ ನೇಮಕಕ್ಕೆ ಆಗ್ರಹ
ಬೆಂಗಳೂರು, ಸೆ.12: ಜನತಾದಳದ(ಯುನೈಟೆಡ್) ಅಧ್ಯಕ್ಷ ನಾಡಗೌಡರ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಕರ್ನಾಟಕ ರಾಜ್ಯದ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಯುವ ಜನತಾದಳದ(ಯು) ಅಧ್ಯಕ್ಷ ಕೆ.ವಿ.ಶಿವರಾಮ್ ಆಗ್ರಹಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಗೌಡರ ಅಧ್ಯಕ್ಷ ಅವಧಿ ಏಪ್ರಿಲ್ 2016ಕ್ಕೆ ಮುಕ್ತಾಯವಾಗಿದ್ದು, ಅಧ್ಯಕ್ಷರ ಚುನಾವಣೆಗೆ ಯೋಗ್ಯವಾದ ಸದಸ್ಯತ್ವವನ್ನು ಮಾಡದೇ, ಪಕ್ಷವನ್ನು ಅತಂತ್ರ ಸ್ಥಿತಿಗೆ ತಳ್ಳಿದ್ದಾರೆ. ನಿತೀಶ್ ಕುಮಾರ್ ರಾಷ್ಟ್ರೀಯ ಅಧ್ಯಕ್ಷರಾದ ನಂತರ ನಾಡಗೌಡರನ್ನು ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಪಕ್ಷ ಎರಡು ಭಾಗವಾದ ನಂತರ ನಾಡಗೌಡ ಪಕ್ಷದ ರಾಷ್ಟ್ರೀಯ ಪರಿಷತ್ತಿಗೆ ಹಾಜರಾಗದೇ ಶರದ್ ಯಾದವ್‌ಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಅಲ್ಲದೆ, ಈಗ ಇವರು ನಾನೇ ಅಧ್ಯಕ್ಷ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೂಡಲೇ ಇವರನ್ನು ಪಕ್ಷದಿಂದ ವಜಾ ಮಾಡಬೇಕು ಹಾಗೂ ನೂತನವಾಗಿ ಅಧ್ಯಕ್ಷರು ಮತ್ತು ಸಂಚಾಲಕರನ್ನು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಸುಂದರ್‌ವೇಲು, ಕೆ.ಜಿ.ಎಲ್.ರವಿ, ಶ್ರೀರಾಮರೆಡ್ಡಿ, ಎಚ್.ಎ.ಲಕ್ಷ್ಮಯ್ಯ, ಎಂ.ವಿ.ತ್ಯಾಗರಾಜು, ಡಿ.ಕೆ.ಶ್ರೀನಿವಾಸ, ತಿರುಪತಿರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







