ಸೈನಿಕ ಸ್ಮಾರಕ ಅಭಿವೃದ್ಧಿಗೆ 10 ಕೋಟಿ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಸೆ.12: ನಗರದಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕ ಅಭಿವೃದ್ಧಿಗೆ 10 ಕೋಟಿ ರೂ. ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ಮಂಗಳವಾರ ರಾಷ್ಟ್ರೀಯ ಸೈನಿಕ ಸ್ಮಾರಕ ಆವರಣಕ್ಕೆ ಭೇಟಿ ನೀಡಿ ಅಭಿವೃದ್ಧಿ ಚಟುವಟಿಕೆಗಳು ಮತ್ತು ಸೈನಿಕರ ವೀರಗಲ್ಲುಗಳನ್ನು ವೀಕ್ಷಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಷ್ಟ್ರೀಯ ಸೈನಿಕ ಸ್ಮಾರಕ ಅಭಿವೃದ್ಧಿಗೆ ಈ ಹಿಂದೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು 2008ರಿಂದ ಸ್ಥಗಿತಗೊಂಡಿದೆ. ಸ್ಥಗಿತಗೊಂಡಿರುವ ಸಮಿತಿಯನ್ನು ಪುನಃ ಆರಂಭಿಸಲು ಮುಖ್ಯಮಂತ್ರಿಗಳು ಹಾಗೂ ಸರಕಾರದ ಕಾರ್ಯದರ್ಶಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸ್ಮಾರಕ ಆವರಣ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಿಡಿಎ 19 ಲಕ್ಷ ರೂ.ಗಳನ್ನು ನೀಡಿದೆ. ಆವರಣದ ಸಮಗ್ರ ಅಭಿವೃದ್ಧಿಗೆ ಇನ್ನೂ 10 ಕೋಟಿ ರೂ.ಅಗತ್ಯವಿದೆ ಎಂದು ರಾಷ್ಟ್ರೀಯ ಸೈನಿಕ ಸ್ಮಾರಕ ಟ್ರಸ್ಟ್ ಬೇಡಿಕೆ ಇಟ್ಟಿದೆ. ಮುಂದಿನ ಎರಡು ವಾರಗಳಲ್ಲಿ ಮುಖ್ಯಮಂತ್ರಿಗಳೊಡನೆ ಮಾತುಕತೆ ನಡೆಸಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗವುದು ಎಂದರು.
ತನಿಖೆ ಪೂರ್ಣಗೊಂಡ ಬಳಿಕ ಬಹಿರಂಗ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣವನ್ನು ಶೀಘ್ರದಲ್ಲೇ ಭೇದಿಸಲಾಗುವುದು. ಹತ್ಯೆ ಪ್ರಕರಣ ಇನ್ನು ತನಿಖೆಯ ಹಾದಿಯಲ್ಲಿದೆ. ಹಂತಕರ ಸುಳಿವು ಸಿಕ್ಕಿದೆ. ಯಾರು ಎಂಬುವುದು ತನಿಖೆ ಪೂರ್ಣಗೊಂಡ ಬಳಿಕ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.
ಗೌರಿ ಅವರ ಅವರ ವಿಚಾರಗಳನ್ನು ಒಪ್ಪದವರು ಅವರನ್ನು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಗೌರಿ ಹತ್ಯೆ ಪ್ರಕರಣ ಭೇದಿಸಲು ರೂಪಿಸಿರುವ ಎಸ್‌ಐಟಿ ತಂಡಕ್ಕೆ ಎಲ್ಲ ಅಧಿಕಾರವನ್ನು ನೀಡಲಾಗಿದೆ. ಈ ತಂಡದ ತನಿಖೆಯ ಮೇಲೆ ಯಾವುದೇ ಒತ್ತಡವಿಲ್ಲ ಎಂದರು.
ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ವಲಯದ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿಯಲ್ಲಿ ನಿಗಾ ವಹಿಸಬೇಕು. ಜೊತೆಗೆ ರೌಡಿ ಶೀಟರ್‌ಗಳನ್ನು ಮಟ್ಟ ಹಾಕಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ನಿವೃತ್ತ ರಾಷ್ಟ್ರೀಯ ಸೈನಿಕ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಏರ್ ಕಮಾಂಡರ್ ಚಂದ್ರಶೇಖರ್ ಸೇರಿದಂತೆ ನಿವೃತ್ತ ಸೈನಿಕರು ಉಪಸ್ಥಿತರಿದ್ದರು.
ಗೌರಿ ಹತ್ಯೆ ಖಂಡಿಸಿ ಹಮ್ಮಿಕೊಂಡಿರುವ ಪ್ರತಿರೋಧ ರ್ಯಾಲಿ ಕಾಂಗ್ರೆಸ್ ಪ್ರಾಯೋಜಿತವಲ್ಲ. ಗೌರಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯೂ ಅಲ್ಲ. ಸರಕಾರದಿಂದ ಭದ್ರತೆ ನೀಡಿರುವ ವಿಚಾರವಾದಿಗಳು ಯಾರು ಕಾಂಗ್ರೆಸ್ಸಿಗರು ಅಲ್ಲ.
-ರಾಮಲಿಂಗಾರೆಡ್ಡಿ, ಗೃಹ ಸಚಿವ







