ಯುವ ಜನತೆ ಪರಿಸರ ಕ್ರಾಂತಿಯತ್ತ ಮುಖ ಮಾಡಲಿ: ಪ್ರಮೋದ್ ಮಧ್ವರಾಜ್

ಬೆಂಗಳೂರು, ಸೆ. 12: ನಮ್ಮ ಸುತ್ತಮುತ್ತಲಿನ ಪರಿಸರ ನಾನಾ ಕಾರಣಗಳಿಂದ ಅಪಾಯದ ಹಂತಕ್ಕೆ ಮುಟ್ಟಿದ್ದು, ಪರಿಸರವನ್ನು ಪುನರ್ ನಿರ್ಮಿಸುವ ನಿಟ್ಟಿನಲ್ಲಿ ಯುವಜನತೆ ‘ಪರಿಸರ ಕ್ರಾಂತಿ’ಯತ್ತ ಮುಖ ಮಾಡಬೇಕಾದ ತುರ್ತು ಅಗತ್ಯವಿದೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಆಶಿಸಿದರು.
ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗವು ಮಂಗಳವಾರ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ‘ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ, ಪರಿಸರ ಮನನ ಹಾಗೂ ಯೂತ್ ರೆಡ್‌ಕ್ರಾಸ್ ಸಂಯೋಜಕರ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ಮುಂದಿನ ಕೆಲವೇ ದಶಕಗಳಲ್ಲಿ ಮನುಕುಲ ದೊಡ್ಡ ಗಂಡಾಂತರಕ್ಕೆ ಸಿಲುಕಲಿದೆ. ಪ್ರಸ್ತುತ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ. ಈ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಿ ನೀರು ಸೇರಿದಂತೆ ಪರಿಸರವನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ಹೊರುವಂತಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಕೇವಲ ಪ್ರಚಾರದ ದೃಷ್ಟಿಯಿಂದ ಪ್ರತಿವರ್ಷವೂ ವನಮಹೋತ್ಸವವನ್ನು ಆಚರಿಸಲಾಗುತ್ತದೆಯೇ ಹೊರತು ಪರಿಸರ ಸಂರಕ್ಷಣೆಯ ನಿಜವಾದ ಕಾಳಜಿ ಇಲ್ಲವಾಗಿದೆ. ಹಲವು ಸಂಘಟನೆಗಳು ಕಾಟಾಚಾರಕ್ಕೆ ಹಾಗೂ ಕಾಲಾಹರಣಕ್ಕೆ ಪರಿಸರ ರಕ್ಷಣೆ ಕುರಿತು ಮಾತನಾಡುತ್ತವೆ. ಇಂತಹ ಸ್ಥಿತಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಜವಾಬ್ದಾರಿ ಹೆಚ್ಚಿದ್ದು, ಯುತ ಜನತೆ ಪರಿಸರ ಸಂರಕ್ಷಣೆಯ ಕುರಿತು ಉತ್ಸಾಹ ಹಾಗೂ ಆಸಕ್ತಿಯಿಂದ ಕಂಕಣ ಬದ್ಧರಾಗಬೇಕು ಎಂದು ಅವರು ಆಶಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಬಿ.ಕೆ.ರವಿ ಮಾತನಾಡಿ, ಪ್ರಕೃತಿ ಮತ್ತು ಪರಿಸರ ಉಳಿಸುವ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಘಟಕದ ವತಿಯಿಂದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಹಾಗೆಯೇ ಬಯೋಪಾರ್ಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ವಿವಿ ಆವರಣದಲ್ಲಿ 3.80 ಲಕ್ಷ ಗಿಡಗಳನ್ನು ನೆಡಲಾಗಿದೆ. ಇದರ ಜೊತೆಗೆ ಪ್ರತಿಯೊಬ್ಬ ಎನ್ನೆಸ್ಸೆಸ್ ವಿದ್ಯಾರ್ಥಿಯೂ ಒಂದೊಂದು ಗಿಡವನ್ನು ದತ್ತು ತೆಗೆದುಕೊಂಡು ಹೆಮ್ಮರವನ್ನಾಗಿ ಬೆಳೆಸಬೇಕು. ಹಾಗೆಯೇ ರಕ್ತದಾನ ಮತ್ತು ಅಂಗಾಂಗ ದಾನ ಕುರಿತು ಯುವ ಪೀಳೆಗೆಯು ಜನತೆಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಬಿ.ಎಲ್.ಶಂಕರ್ ಮಾತನಾಡಿ, ಪರಿಸರ ಮತ್ತು ಮನುಕುಲ ಬೇರೆಯಲ್ಲ. ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಪರಿಸರ ನಾಶವಾದರೆ ಮಾನವ ಕುಲ ನಾಶವಾದಂತೆ. ಈಗಾಗಲೇ ಪರಿಸರಕ್ಕೆ ಸಂಬಂಧಿಸಿದ ಹಕ್ಕಿ ಲೋಕ, ಕೀಟಲೋಕ, ಪುಷ್ಪಲೋಕ, ಜೇಡ ಲೋಕದಂತಹ ಪ್ರದರ್ಶನಗಳನ್ನು ನಡೆಸಲಾಗಿದೆ. ತೇಜಸ್ವಿ ಅವರ ಪರಿಸರ ಕಥಾ ಪ್ರಸಂಗಗಳ ಕುರಿತು ಪುಸ್ತಕಗಳ ಬಗ್ಗೆ ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಕಾಳಜಿ ಮೂಡಿಸುವ ಪಠ್ಯ ಪುಸ್ತಕಗಳನ್ನು ಹೊರ ತರುವ ಅಗತ್ಯವಿದೆ. ದೇಶದ ಪ್ರತಿಶಾಲೆಯ, ಪ್ರತಿ ವಿದ್ಯಾರ್ಥಿಯ ಕೈಯಲ್ಲಿ ಪರಿಸರ ಪುಸ್ತಕ ಇರಬೇಕು. ಹಾಗೂ ಆದ್ಯತೆಯ ಮೇರೆಗೆ ಶಿಕ್ಷಕರು ಹಾಗೂ ಪರಿಸರ ತಜ್ಞರು ಪರಿಸರದ ಕುರಿತು ವಿದ್ಯಾರ್ಥಿಗಳಿಗೆ ಆಸಕ್ತಿಯನ್ನು ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.
ಜಗತ್ತಿನ ಚಿಕ್ಕ ದೇಶಗಳಲ್ಲಿ ಒಂದಾದ ಭೂತಾನ್‌ನಲ್ಲಿ ಸುಮಾರು ಶೇ.72 ರಷ್ಟು ಅರಣ್ಯ ಪ್ರದೇಶವಿದ್ದು, ಇಡೀ ದೇಶವೇ ವೈವಿಧ್ಯಮಯ ತಾಣವಾಗಿದೆ. ಇಲ್ಲಿನ ನದಿಗಳಲ್ಲಿ ಮೀನುಗಳನ್ನು ಹಿಡಿಯುವಂತಿಲ್ಲ. ಮರಳುಗಾರಿಕೆಗೆ ಅವಕಾಶವೇ ಇಲ್ಲವಾಗಿದೆ. ಒಂದು ಜೀವಂತ ಮರವನ್ನೂ ಕಡಿಯುವಂತಿಲ್ಲ. ಪರಿಸರ ಸಂಕರಕ್ಷಣೆಗಾಗಿ ಹೆಚ್ಚು ಒತ್ತು ನೀಡುತ್ತಿದೆ. ಆದರೆ, ನಮ್ಮ ದೇಶಕ್ಕೆ ಸ್ವಾತಂತ್ರ ಬಂದಾಗ ಒಟ್ಟು ಭೂಪ್ರದೇಶದಲ್ಲಿ ಶೇ. 33ರಷ್ಟು ಅರಣ್ಯ ಪ್ರದೇಶವಿತ್ತು. ಅದರಲ್ಲಿ ಶೇ.7ರಷ್ಟು ಅರಣ್ಯ ಪ್ರದೇಶವನ್ನು ಈಗಾಗಲೇ ಕಳೆದುಕೊಂಡಿದ್ದೇವೆ.
-ಪ್ರಮೋದ್ ಮಧ್ವರಾಜ್, ಸಚಿವ, ಯುವ ಸಬಲೀಕರಣ ಮತ್ತು ಕ್ರೀಡಾ







