ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರಾದಸಂಸ ಪ್ರತಿಭಟನೆ

ಮಂಡ್ಯ, ಸೆ.12: ತಾಲೂಕಿನ ಪರಿಶಿಷ್ಟರು ಉಳುಮೆ ಮಾಡುತ್ತಿರುವ ಅಕ್ರಮ ಭೂಮಿ ಸಕ್ರಮಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.
ಆಳುವ ಸರಕಾರಗಳು ದಲಿತರ ಬಗ್ಗೆ ನಿರ್ಲಕ್ಷ್ಯ ತೋರಿವೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯಗಳನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಇದರಿಂದಾಗಿ ದಲಿತರು ಹೋರಾಟ ಮಾಡಿಕೊಂಡೇ ಬರಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷವಾದರೂ ಪರಿಶಿಷ್ಟರು ಉಳುಮೆ ಮಾಡುತ್ತಿರುವ ಅಕ್ರಮ ಭೂಮಿಯನ್ನು ಸಕ್ರಮಗೊಳಿಸಲು ಕ್ರಮವಹಿಸಿಲ್ಲ. ಈ ಸಂಬಂಧ ರಚಿಸಿರುವ ದರಖಾಸು ಸಮಿತಿ ನಿಷ್ಕ್ರಿಯವಾಗಿದೆ ಎಂದು ಅವರು ದೂರಿದರು.
ಒತ್ತಾಯಗಳು: ಕೊತ್ತತ್ತಿ ಗ್ರಾಮದ ಮುಪ್ಪತ್ತು ಕೀರೆಮಡಿ ಸಂ.ನಂ.351, 352ರ ಸರಕಾರಿ ಜಾಗದಲ್ಲಿ ಹಾಗೂ ಮಲ್ಲೇನಹಳ್ಳಿ ಕುಳವಾಡಿ ಇನಾಂ ಭೂಮಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಬೇಕು. ಸಂಪಹಳ್ಳಿ ಗ್ರಾಮದ ಪ.ಜಾತಿ ಕಾಲನಿಯಲ್ಲಿ ಅರ್ಧಕ್ಕೆ ನಿಂತಿರುವ ಬಾಕ್ಸ್ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
ಹಲ್ಲೇಗೆರೆಯಲ್ಲಿ ಸರಕಾರಿ ಜಮೀನನ್ನು ಆಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಿ ನಿವೇಶನವಿಲ್ಲದ ಕಡು ಬಡ ಕುಟುಂಬಗಳಿಗೆ ಹಂಚಬೇಕು ಹಾಗೂ ಉಳಿದ ಭೂಮಿಯನ್ನು ಜನಜಾನುವಾರುಗಳ ಅನುಕೂಲಕ್ಕೆ ಕಾಯ್ದಿರಿಸಬೇಕು. ಜಿ.ಮಲ್ಲಿಗೆರೆ ಗ್ರಾಮದ ಪ.ಜನಾಂಗದ ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಪಡಿಸಬೇಕು.
ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ನಿಧಿ 2ರಲ್ಲಿ 22.75 ಹಣವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಪಿಡಿಓಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಸಂಪಳ್ಳಿ ಗ್ರಾಮದ ಪ.ಜಾತಿಯವರಿಗೆ ನೀಡಿರುವ ಜಾಗಕ್ಕೆ ಹೋಗಲು ರಸ್ತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಬೇಕು.
ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್, ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಸಂತೋಷ್‍ಕುಮಾರ್, ಕೊತ್ತತ್ತಿ ಜಯರಾಮು, ಚುಂಚಯ್ಯ, ಜಯರಾಂ, ಎಂ.ಕೃಷ್ಣಪ್ಪ, ಎಚ್.ಎಂ.ರಮೇಶ್, ಎಚ್.ಬಿ.ಅಪ್ಪಾಜಿ, ಶ್ರೀನಿವಾಸ್, ಗೋವಿಂದಪ್ಪ, ರವೀಶ್, ಶಿವಣ್ಣ, ಇತರರು ಪಾಲ್ಗೊಂಡಿದ್ದರು







