ವಿಚಾರವಾದಿಗಳ ಹತ್ಯೆ; ವಿಶ್ವಸಂಸ್ಥೆಗೆ ದೂರು ನೀಡಲು ಚಿಂತನೆ: ಕೆ.ನೀಲಾ

ಬೆಂಗಳೂರು, ಸೆ.12: ದೇಶದಲ್ಲಿ ವೈಚಾರಿಕ ಕಾರಣಕ್ಕೆ ಹಿಂದೂ ಮೂಲಭೂತ ವಾದಿಗಳಿಂದ ವಿಚಾರವಾದಿಗಳ ಹತ್ಯೆಗಳು ಹೆಚ್ಚಾಗುತ್ತಿವೆ. ಈ ಸಂಬಂಧ ವಿಶ್ವಸಂಸ್ಥೆಗೆ ದೂರು ನೀಡಲು ಚಿಂತನೆ ನಡೆಸಲಾಗಿದೆ ಎಂದು ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯ ಮುಖ್ಯಸ್ಥೆ ಕೆ.ನೀಲಾ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಇಂದು ಪ್ರತಿಕ್ರಿಯೆ ನೀಡಿದೆ. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲಬುರ್ಗಿ ಹತ್ಯೆಯಾದಾಗ ಪ್ರತ್ಯೇಕ ಹತ್ಯೆ ವಿರೋಧಿ ಹೋರಾಟ ವೇದಿಕೆಗಳು ನಿರ್ಮಾಣವಾಗಿವೆ ಎಂದರು.
ಆ ಎಲ್ಲ ವೇದಿಕೆಗಳನ್ನು ಒಟ್ಟಾಗಿ ಸೇರಿಸಿ ಚರ್ಚೆ ನಡೆಸುತ್ತೇವೆ. ಭಾರತದಲ್ಲಿ ವೈಚಾರಿಕ ಕಾರಣಕ್ಕೆ ಹಿಂದೂ ಮೂಲಭೂತವಾದಿಗಳಿಂದ ಹತ್ಯೆಯಾಗುತ್ತಿರುವುದು ಹೆಚ್ಚಾಗುತ್ತಿದೆ. ಈ ಎಲ್ಲ ವಿಚಾರಗಳನ್ನು ಚರ್ಚೆ ನಡೆಸಿ ವಿಶ್ವಸಂಸ್ಥೆಗೆ ಯಾವ ರೀತಿ ದೂರು ನೀಡಬಹುದು, ಯಾವ ರೀತಿಯಲ್ಲಿ ಈ ವಿಷಯಗಳನ್ನು ಅವರ ಗಮನಕ್ಕೆ ತರಬಹುದು ಎಂಬುದರ ಕುರಿತು ಯೋಚಿಸುತ್ತಿದ್ದೇವೆ ಎಂದು ಅವರು ಹೇಳಿದರು.





