ಮೂಡಿಗೆರೆ : ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಗದ್ದಲ

ಮೂಡಿಗೆರೆ, ಸೆ.12: ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ತಾ.ಪಂ. ಸರ್ವ ಸದಸ್ಯರ ಸಾಮಾನ್ಯ ಸಭೆಯ ಪ್ರಾರಂಭದಲ್ಲಿ ತಾ.ಪಂ. ಸದಸ್ಯರಾದ ರಫೀಕ್ ಮತ್ತು ಹಿತ್ತಲಮಕ್ಕಿ ರಾಜೇಂದ್ರ ಅವರು ತಾ.ಪಂ. ಅಧ್ಯಕ್ಷರು ಪಿಡಬ್ಲೂಡಿ ಇಲಾಖೆಯಲ್ಲಿ ಕಾಮಗಾರಿಯೊಂದಕ್ಕೆ ಟೆಂಡರ್ ಹಾಕಿರುವುದು ಕಾನೂನು ಬಾಹೀರವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡುವುದರ ಜೊತೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ಕುರಿತು ಸುಮಾರು ಒಂದು ಗಂಟೆಗಳ ಕಾಲ ವಿನಾಕಾರಣ ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತಲೇ ಸಭೆಯಲ್ಲಿ ಗಲಭೆ ಮುಂದುವರೆಯಿತು. ಈ ವೇಳೆ ತಾ.ಪಂ. ಉಪಾಧ್ಯಕ್ಷೆ ಸವಿತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ವೀಣಾ ಉಮೇಶ್, ಸುಂದರ್ ಕುಮಾರ್, ದೇವರಾಜು ಅವರು, ಗಲಭೆ ಶುರುವಾಗಿ ಒಂದು ಗಂಟೆಯಾದರೂ ಸಾಮಾನ್ಯ ಸಭೆ ಶುರು ಮಾಡಿಲ್ಲ. ಬೇಡದ ವಿಚಾರವನ್ನು ಹೊರಗಡೆ ಮಾತನಾಡಿಕೊಳ್ಳಿ. ಇಲ್ಲಿ ಚರ್ಚೆ ಮುಂದುವರೆಸಿ ಇಲ್ಲವಾದರೆ ತಾವು ಹೊರಗೆ ಹೋಗುತ್ತೇವೆಂದು ಹೊರ ಹೋಗಲು ಎದ್ದು ನಿಂತರು.
ಬಳಿಕ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಮಾತನಾಡಿ, ತಾನೂ ಟೆಂಡರ್ ಹಾಕಿದ್ದು ನಿಜ. ಆದರೆ ಅದನ್ನು ರದ್ದುಪಡಿಸಲಾಗಿದೆ. ಟೆಂಡರ್‍ಗೆ ಕಾನೂನು ಅಡಿಯಲ್ಲಿಯೆ ಅರ್ಜಿ ಸಲ್ಲಿಸಿದ್ದೇನೆ. ತಾನು ತಾ.ಪಂ. ಚುನಾವಣೆ ಗೆದ್ದ ಬಳಿಕ ಯಾವ ಗುತ್ತಿಗೆಯೂ ಮಾಡಿಲ್ಲ. ಮಾಡಿದ್ದರೆ ಅದನ್ನು ಸಾಬೀತುಪಡಿಸಿ ಎಂದು ಸವಾಲಾಕಿದ ಅವರು, ಎಂದು ಪಂಚಾಯತ್ ರಾಜ್ ಪುಸ್ತಕದ ವಿಧಿಯನ್ನು ಓದಿ ಸ್ಪಷ್ಟನೆ ನೀಡುತ್ತಾ, ತಾವು ಕೇಳಿರುವ ಪ್ರಶ್ನೆಗಳಿಗೆ ದಾಖಲೆ ಮೂಲಕ ಉತ್ತರ ನೀಡಿದ್ದೇನೆ. ಮೊದಲು ಕಾನೂನು ತಿಳಿದುಕೊಂಡು ಮಾತನಾಡಿ, ಅದನ್ನು ಬಿಟ್ಟು ಸುಮ್ಮನೆ ಕಾಲ ಹರಣ ಮಾಡುವುದು ಸರಿಯಲ್ಲ. ಸಭೆಯಲ್ಲಿ ಓರ್ವ ಸದಸ್ಯ ನಿಗದಿತ ಸಮಯದೊಳಗೆ 3 ಪ್ರಶ್ನೆ ಮಾಡಬಹುದು. ಹೆಚ್ಚುವರಿ ಪ್ರಶ್ನೆ ಮಾಡುವಂತಿಲ್ಲ. ಸಭೆಗೆ ಅಡ್ಡಿಪಡಿಸಿದರೆ ಅಂತವರನ್ನು ಹೊರ ಹಾಕಲು ನಿಯಮದಲ್ಲಿ ಅವಕಾಶವಿದೆ ಎಂದು ಗಟ್ಟಿ ಧ್ವನಿಯಿಂದ ಉತ್ತರಿಸಿದರು. ಬಳಿಕ ಸಭೆ ಮುಂದುವರೆಯಿತು.







