ರೊಹಿಂಗ್ಯಾ ನಿರಾಶ್ರಿತ ಶಿಬಿರಕ್ಕೆ ಬಾಂಗ್ಲಾ ಪ್ರಧಾನಿ ಭೇಟಿ

ಉಖಿಯ (ಬಾಂಗ್ಲಾದೇಶ), ಸೆ. 12: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಸೇನಾ ದಮನ ಕಾರ್ಯಾಚರಣೆಗೆ ಬೆದರಿ ಪಲಾಯನಗೈದಿರುವ ರೊಹಿಂಗ್ಯಾ ನಿರಾಶ್ರಿತರು ಆಶ್ರಯ ಪಡೆದಿರುವ ನಿರಾಶ್ರಿತ ಶಿಬಿರವೊಂದಕ್ಕೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮಂಗಳವಾರ ಭೇಟಿ ನೀಡಿದರು.
ತನ್ನ ರಾಷ್ಟ್ರೀಯರನ್ನು ಮರಳಿ ಪಡೆಯಲು ಮ್ಯಾನ್ಮಾರ್ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಸೀನಾ ಒತ್ತಾಯಿಸಿದರು ಹಾಗೂ ಅಲ್ಲಿಯವರೆಗೆ ಅವರಿಗೆ ತಾತ್ಕಾಲಿಕ ನೆರವನ್ನು ನೀಡುವ ಭರವಸೆ ನೀಡಿದರು.
ಕಾಕ್ಸ್ ಬಝಾರ್ ಜಿಲ್ಲೆಯ ಉಖಿಯ ಗಡಿ ಪಟ್ಟಣದ ಕುಟುಪಲಾಂಗ್ ನಿರಾಶ್ರಿತ ಶಿಬಿರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಹಸೀನಾ, ‘‘ನಾವು ಅನ್ಯಾಯವನ್ನು ಸಹಿಸುವುದಿಲ್ಲ’’ ಎಂದರು.
ಸೋಮವಾರ ರಾತ್ರಿ ಬೌದ್ಧ ಬಾಹುಳ್ಯದ ಮ್ಯಾನ್ಮಾರನ್ನು ತರಾಟೆಗೆ ತೆಗೆದುಕೊಂಡ ಬಾಂಗ್ಲಾ ಪ್ರಧಾನಿ, ಅಲ್ಲಿ ನಡೆಯುತ್ತಿರುವ ದೌರ್ಜನ್ಯವು ವಿವರಿಸಲಾಗದ ಹಂತವನ್ನು ತಲುಪಿದೆ ಎಂದರು.
‘‘ಮ್ಯಾನ್ಮಾರನ್ನು ಖಂಡಿಸಲು ತನ್ನಲ್ಲಿ ಪದಗಳಿಲ್ಲ’’ ಎಂದು ಹೇಳಿದ ಅವರು, ರೊಹಿಂಗ್ಯಾ ಮುಸ್ಲಿಮರ ಮೇಲಿನ ಆಕ್ರಮಣವನ್ನು ಬಾಂಗ್ಲಾದೇಶ ಹಿಂದಿನಿಂದಲೂ ಪ್ರತಿಭಟಿಸುತ್ತಾ ಬಂದಿದೆ ಎಂದರು.
ಕನಿಷ್ಠ 3.13 ಲಕ್ಷ ರೊಹಿಂಗ್ಯಾರು ಬಾಂಗ್ಲಾಕ್ಕೆ
ರೊಹಿಂಗ್ಯಾ ಬಂಡುಕೋರರು ಆಗಸ್ಟ್ 25ರಂದು ರಖೈನ್ ರಾಜ್ಯದಲ್ಲಿರುವ ಹಲವು ಪೊಲೀಸ್ ಮತ್ತು ಸೇನಾ ಠಾಣೆಗಳ ಮೇಲೆ ನಡೆಸಿದ್ದಾರೆನ್ನಲಾದ ಸರಣಿ ದಾಳಿಗಳ ಬಳಿಕ ಅಲ್ಲಿ ಹಿಂಸಾಚಾರ ಆರಂಭವಾಗಿದೆ.
ರೊಹಿಂಗ್ಯಾ ಬಂಡುಕೋರರ ದಾಳಿಯ ಬೆನ್ನಿಗೇ ಮ್ಯಾನ್ಮಾರ್ ಸೇನೆಯು ರಖೈನ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ದಮನ ಕಾರ್ಯಾಚರಣೆ ಆರಂಭಿತ್ತು. ಈವರೆಗೆ 3,13,000 ರೊಹಿಂಗ್ಯರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ನಡುವೆ, ಸೈನಿಕರು ಸೋಮವಾರ ಗುಂಡು ಹಾರಿಸುತ್ತಾ ಮತ್ತು ಮನೆಗಳಿಗೆ ಬೆಂಕಿ ಕೊಡುತ್ತಾ ಪಾ ದಿನ ಎಂಬ ಗ್ರಾಮವನ್ನು ಪ್ರವೇಶಿಸಿದ್ದಾರೆ ಹಾಗೂ ಅಲ್ಲಿಂದ ನೂರಾರು ರೊಹಿಂಗ್ಯಾ ಮುಸ್ಲಿಮರು ಪಲಾಯನಗೈದಿದ್ದಾರೆ ಎಂದು ಮ್ಯಾನ್ಮಾರ್‌ನಲ್ಲಿರುವ ರೊಹಿಂಗ್ಯ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ನೂತನ ಶಿಬಿರಕ್ಕಾಗಿ 2,000 ಎಕರೆ ಜಮೀನು ಬಾಂಗ್ಲಾದೇಶ ಕೊಡುಗೆ
ಹೊಸದಾಗಿ ಬಂದಿರುವ ನಿರಾಶ್ರಿತರಿಗೆ ಆಶ್ರಯ ನೀಡಲು ಕಾಕ್ಸ್ ಬಝಾರ್ ಜಿಲ್ಲೆಯಲ್ಲಿ ನೂತನ ಶಿಬಿರವೊಂದನ್ನು ನಿರ್ಮಿಸುವುದಕ್ಕಾಗಿ 2,000 ಎಕರೆ ಜಮೀನು ನೀಡುವುದಾಗಿ ಬಾಂಗ್ಲಾದೇಶ ಹೇಳಿದೆ.
ಹೊಸದಾಗಿ ಬಂದಿರುವ ರೊಹಿಂಗ್ಯಾರ ಬೆರಳಚ್ಚುಗಳನ್ನು ಪಡೆದು ಅವರನ್ನು ದಾಖಲಿಸಿಕೊಳ್ಳುವ ಕಾರ್ಯವನ್ನೂ ಬಾಂಗ್ಲಾ ಆರಂಭಿಸಿದೆ.
ಕುಟುಪಲಾಂಗ್ ಮತ್ತು ಈಗಾಗಲೇ ಸ್ಥಾಪಿಸಲ್ಪಟ್ಟಿರುವ ಇನ್ನೊಂದು ಶಿಬಿರಗಳಲ್ಲಿ ನಿರಾಶ್ರಿತರು ಕಿಕ್ಕಿರಿದು ಸೇರಿದ್ದಾರೆ.







