ಸೆ.15ಕ್ಕೆ ಎಂಐಟಿಯಲ್ಲಿ ಇಂಜಿನಿಯರ್ಸ್ ದಿನಾಚರಣೆ
ಉಡುಪಿ, ಸೆ.12: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಜ್ರ ಮಹೋತ್ಸವದಂಗವಾಗಿ ಸೆ.15ರಂದು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು -ಇಂಜಿನಿಯರ್ಸ್ ಡೇ- ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಮಂಗಳವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂದು ಉಡುಪಿ ಆಸುಪಾಸಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಎಂಐಟಿಗೆ ಕರೆಸಿ ಅವರಿಗೆ ಇಲ್ಲಿ ನಡೆಯುತ್ತಿರುವ ವಿವಿಧ ಚಟುವಟಿಕೆ, ಸಂಶೋಧನೆ, ಹೊಸ ಹೊಸ ಪ್ರಯೋಗಗಳ ಕುರಿತು ಮಾಹಿತಿಗಳನ್ನು ನೀಡಲಾಗುತ್ತದೆ. ಇಂಜಿನಿಯರಿಂಗ್ ಕಾಲೇಜೊಂದರ ಕುರಿತು ಅವರಿಗೆ ಪ್ರಾಥಮಿಕ ತಿಳುವಳಿಕೆ ನೀಡಲಾಗುತ್ತದೆ ಎಂದರು.
ಅಲ್ಲದೇ ಅಂದು ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ, ಪ್ರಾಯೋಗಿಕ ಮಾದರಿಗಳ ನಿರ್ಮಾಣ ಸ್ಪರ್ಧೆ ಏರ್ಪಡಿಸಿದ್ದು, ಇದಕ್ಕೆ 200ಕ್ಕೂ ಅಧಿಕ ಮಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಡಾ.ಪ್ರಭು ತಿಳಿಸಿದರು.
ಅಲ್ಲದೇ ಎಂಐಟಿ ವಿದ್ಯಾರ್ಥಿಗಳು ತಯಾರಿಸಿ, ದೇಶ-ವಿದೇಶಗಳಲ್ಲಿ ಪುರಸ್ಕೃತ ಗೊಂಡಿರುವ ಪ್ರಾತ್ಯಕ್ಷಿಕೆ, ಮಾದರಿಗಳ ಪ್ರದರ್ಶನವನ್ನು ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಫಾರ್ಮುಲಾ ಮಣಿಪಾಲ್, ರೋಬೊ ಮಣಿಪಾಲ್, ಆಲ್‌ಟೆರೆನ್ ವೆಹಿಕಲ್, ಹೊಸದಾಗಿ ನಿರ್ಮಿಸಲಾದ ಸೋಲಾರ್ ಮೋಬಿನ್, ಏರೋ ಎಂಏಟಿ, ಟೀಮ್ ಮಣಿಪಾಲ ರೇಸಿಂಗ್, ಚಾಲಕರಹಿತ ಕಾರು ಹಾಗೂ ಇತರ ಮೊಡೆಲ್‌ಗಳ ಪ್ರಾತ್ಯಕ್ಷಿಕೆ ಇರುತ್ತದೆ ಎಂದರು.
ಎಂಐಟಿಯನ್ನು ಗ್ರೀನ್ ಕ್ಯಾಂಪಸ್ ಆಗಿ ರೂಪಿಸುವ ಕಾರ್ಯ ಭರದಿಂದ ನಡೆದಿದ್ದು, ಇತ್ತೀಚೆಗೆ ಕ್ಯಾಂಪಸ್‌ನಲ್ಲಿ 750 ವಿವಿಧ ಜಾತಿಯ ಗಿಡಗಳನ್ನು ನಡೆಲಾಗಿದೆ. ಅಲ್ಲದೇ ಇತ್ತೀಚೆಗೆ ಬನ್ನಂಜೆಲ್ಲಿ ಭಾರೀ ಗಾಳಿಗೆ ಬುಡಸಹಿತ ಧರಾಶಾಹಿಯಾದ ಹಲವು ದಶಕಗಳ ಪುರಾತನ ಆಲದ ಮರವನ್ನು ಎಂಐಟಿ ಕ್ಯಾಂಪಸ್‌ನಲ್ಲಿ ನೆಡಲಾಗಿದ್ದು, ಅದೀಗ ಚಿಗುರು ಬಿಡತೊಡಗಿದೆ ಎಂದು ಡಾ.ಪ್ರಭು ಖುಷಿಯಿಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂಐಟಿಯ ಪ್ರಾಧ್ಯಾಪಕರಾದ ಪ್ರೊ.ಜಗನ್ನಾಥ್ ಕೆ., ಪ್ರೊ. ಬಾಲಕೃಷ್ಣ ಮುದ್ದೋಡಿ, ಪ್ರೊ.ಗಣೇಶ ಕುಡ್ವ ಮುಂತಾದವರು ಉಪಸ್ಥಿತರಿದ್ದರು.







