ಹಿಂದೂ ವಿವಾಹ ಕಾಯ್ದೆ: ವಿಚ್ಛೇದನಕ್ಕೆ ಕಾಯುವಿಕೆ ಅವಧಿಯನ್ನು 6 ತಿಂಗಳು ತಗ್ಗಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಸೆ.12: ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನಕ್ಕೆ ಕಾಯುವಿಕೆಯ ಅವಧಿಯನ್ನು ಆರು ತಿಂಗಳು ಕಡಿತಗೊಳಿಸಿರುವ ಸರ್ವೋಚ್ಚ ನ್ಯಾಯಾಲಯವು, ದಂಪತಿಗಳು ಕಡ್ಡಾಯವಾಗಿ 18 ತಿಂಗಳುಗಳ ಕಾಲ ಪ್ರತ್ಯೇಕವಾಗಿ ವಾಸವಿರಬೇಕೆಂಬ ನಿಯಮವನ್ನು ಕೈಬಿಟ್ಟು ವಿಚ್ಛೇದನವನ್ನು ಮಂಜೂರು ಮಾಡಬಹುದು ಎಂದು ಮಂಗಳವಾರ ತೀರ್ಪು ನೀಡಿದೆ.
ಹಿಂದೂ ವಿವಾಹ ಕಾಯ್ದೆಯ ನಿಯಮಗಳನ್ನು ವ್ಯಾಖ್ಯಾನಿಸಿದ ನ್ಯಾಯಮೂರ್ತಿಗಳಾದ ಎ.ಕೆ.ಗೋಯೆಲ್ ಮತ್ತು ಯು.ಯು.ಲಲಿತ್ ಅವರ ಪೀಠವು, ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪ್ರಕರಣಗಳಲ್ಲಿ ಆರು ತಿಂಗಳ ‘ಉಪಶಮನ ಅವಧಿ’ಯನ್ನು ನ್ಯಾಯಾಲಯಗಳು ಮನ್ನಾ ಮಾಡಬಹುದಾಗಿದೆ ಎಂದು ಹೇಳಿತು.
ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕಾಗಿ ಹಿಂದೂ ವಿವಾಹ ಕಾಯ್ದೆಯಲ್ಲಿ ಸೇರಿಸಲಾಗಿರುವ ಕಲಂ 13ಬಿ ಮೇರೆಗೆ ವಿಚ್ಛೇದನದ ಆದೇಶವನ್ನು ಪಡೆಯಲು ಒಟ್ಟು 18 ತಿಂಗಳು ಕಾಯಬೇಕಾಗುತ್ತದೆ.
ಕಲಂ 13ಬಿ(1)ರಡಿ ಒಂದು ವರ್ಷದ ಕಾನೂನಾತ್ಮಕ ಪ್ರತ್ಯೇಕತೆಯ ಬಳಿಕ ದಂಪತಿಗಳು ವಿಚ್ಛೇದನವನ್ನು ಕೋರಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಅರ್ಜಿ ಸಲ್ಲಿಕೆಯಾದ ಬಳಿಕ ವಿಚ್ಛೇದನದ ಆದೇಶವನ್ನು ಪಡೆಯಲು ಕಲಂ 13ಬಿ(2)ರಡಿ ಇನ್ನೂ ಆರು ತಿಂಗಳು ಕಾಯಬೇಕಾಗಿದೆ.
ಕಲಂ 13ಬಿ(2) ಕಡ್ಡಾಯವಲ್ಲ ಎಂದು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯವು, ವೈವಾಹಿಕ ಸಂಬಂಧವು ಸರಿಪಡಿಸಲಾಗದಷ್ಟು ಕೆಟ್ಟಿದ್ದರೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹವನ್ನು ರದ್ದುಗೊಳಿಸಿಕೊಳ್ಳಲು ದಂಪತಿಗೆ ಸಾಧ್ಯವಾಗಲು ಅದನ್ನು ರೂಪಿಸಲಾಗಿತ್ತು. ಆದ್ದರಿಂದ ಪರಸ್ಪರ ಇಷ್ಟಪಡದ ದಂಪತಿಗಳ ನಡುವಿನ ವಿವಾಹ ಸ್ಥಾನಮಾನವನ್ನು ಬಲವಂತದಿಂದ ಮುಂದುವರಿಸುವುದು ಅರ್ಥಹೀನವಾಗಿದೆ ಎಂದು ಒತ್ತಿ ಹೇಳಿತು.
ಅವಸರದಲ್ಲಿ ವಿಚ್ಛೇದನದ ನಿರ್ಧಾರವನ್ನು ಕೈಗೊಂಡಿದ್ದಿದ್ದರೆ ಮತ್ತು ಮರು ಹೊಂದಾಣಿಕೆಯಾಗುವ ಸಾಧ್ಯತೆಗಳಿದ್ದರೆ ಅಂತಹ ನಿರ್ಧಾರದ ಪುನರ್‌ಪರಿಶೀಲನೆಗೆ ಕಾಲಾವಕಾಶ ನೀಡುವುದು ಉಪಶಮನ ಅವಧಿಯ ಉದ್ದೇಶವಾಗಿದೆಯೇ ಹೊರತು ದಂಪತಿಯ ನಡುವೆ ಮರುಹೊಂದಾಣಿಕೆಯ ಸಾಧ್ಯತೆಯೇ ಇಲ್ಲದಿದ್ದಾಗ ಬಲವಂತದಿಂದ ಅವರ ನೋವುಗಳನ್ನು ಇನ್ನಷ್ಟು ಕಾಲ ಮುಂದುವರಿಸುವುದಲ್ಲ ಎಂದು ಪೀಠವು ಹೇಳಿತು.
ಕಾಯುವಿಕೆಯ ಅವಧಿಯು ದಂಪತಿಗಳ ಬೇಗುದಿಯನ್ನು ಇನ್ನಷ್ಟು ಕಾಲ ಮುಂದುವರಿ ಸುತ್ತದೆ ಮತ್ತು ಅವರ ನಡುವೆ ಮರು ಹೊಂದಾಣಿಕೆಯ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಎನ್ನುವುದನ್ನು ಖಚಿತಪಡಿಸಿಕೊಂಡು ನ್ಯಾಯಾಲಯಗಳು ಆರು ತಿಂಗಳ ಅವಧಿಯನ್ನು ಮನ್ನಾಮಾಡಬಹುದು ಎಂದು ಅದು ಸ್ಪಷ್ಟಪಡಿಸಿದೆ.







