ಬಿಬಿಎಂಪಿ ಸಭೆ ನಿಯಮ ಬಾಹಿರ : ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಆಕ್ಷೇಪ
ಬೆಂಗಳೂರು, ಸೆ.12: ಬಿಬಿಎಂಪಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಘೋಷಣೆಯಾದ ಬಳಿಕವೂ ಪಾಲಿಕೆ ಸಭೆಯನ್ನು ಕರೆಯುವ ಮೂಲಕ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಪಾಲಿಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಂಗಳವಾರ ಬಿಬಿಎಂಪಿ ಸಭೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಸೆಕ್ಷನ್ 16ರ ಪ್ರಕಾರ ಚುನಾವಣೆ ಘೋಷಣೆಯಾದ ಬಳಿಕ ಸಭೆ ಕರೆಯುವಂತಿಲ್ಲ. ಆದರೆ, ಆಡಳಿತ ಪಕ್ಷ ಕಾಂಗ್ರೆಸ್ ಕೆಲವು ನಿರ್ಣಯಗಳನ್ನು ಅನುಮೋದನೆ ಪಡೆದುಕೊಳ್ಳಲೆಂದೇ ಸಭೆ ಕರೆಯಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಪದ್ಮಾವತಿ, ಜಿಎಸ್‌ಟಿ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲು ವಿಶೇಷ ಸಭೆ ಕರೆಯಲು ಕಳೆದ ತಿಂಗಳೆ ನಿರ್ಧರಿಸಲಾಗಿತ್ತು. ಅದರಂತೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಯಾವುದೇ ನಿರ್ಣಯಗಳನ್ನು ಕೈಗೊಳ್ಳುವುದಿಲ್ಲ ಎಂದು ತಿಳಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಎಂ.ಕೆ.ಗುಣಶೇಖರ್, ಬಿಬಿಎಂಪಿ ಸಭೆ ಕರೆಯುವಂತಹ ಅಧಿಕಾರ ಮೇಯರ್‌ಗೆ ಇದೆ. ಅದನ್ನು ಬಳಸಿಕೊಂಡೇ ಸಭೆ ಕರೆದಿದ್ದಾರೆ. ಆದರೆ, ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ. ಇದರ ಬಗ್ಗೆ ಈಗಾಗಲೆ ಮೇಯರ್ ಸ್ಪಷ್ಟಪಡಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.
ಈ ವೇಳೆ ಕಾನೂನು ಕೋಶದ ಮುಖ್ಯಸ್ಥ ಮಾತನಾಡಿ, ತಿಂಗಳಿಗೆ ಒಂದರಂತೆ ಸಭೆ ಕರೆಯುವುದು ಪದ್ಧತಿ. ಅದರಂತೆ ಈ ಸಭೆಯನ್ನೂ ಕರೆಯಲಾಗಿದೆ. ಆದರೆ, ಈಗಾಗಲೇ ನೀತಿ ಸಂಹಿತಿ ಇರುವುದರಿಂದ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ. ಇದಕ್ಕೆ ಆಡಳಿತ ಪಕ್ಷ ಕಾಂಗ್ರೆಸ್ ಬದ್ಧವಾಗಿದೆ ಎಂದು ತಿಳಿಸಿದರು. ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾತನಾಡಿ, ಪಾಲಿಕೆಯ ಬಹುತೇಕ ಸದಸ್ಯರಿಗೆ ಜಿಎಸ್‌ಟಿ ಬಗ್ಗೆ ಗೊಂದಲವಿದೆ. ಅದರ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸುವ ಮೂಲಕ ವಾಗ್ವಾದಕ್ಕೆ ತೆರೆ ಎಳೆದರು.







