ಮಲ್ಪೆ ಸಮುದ್ರದಲ್ಲಿ ಮುಳುಗಿ ಓರ್ವ ಮೃತ್ಯು: ಇನ್ನೋರ್ವನ ರಕ್ಷಣೆ
ಮಲ್ಪೆ, ಸೆ.12: ಸಮುದ್ರದಲ್ಲಿ ಆಡುತ್ತಿದ್ದ ಇಬ್ಬರು ಯುವಕರ ಪೈಕಿ ಓರ್ವ ಮೃತಪಟ್ಟು, ಇನ್ನೋರ್ವನನ್ನು ರಕ್ಷಿಸಿದ ಘಟನೆ ಇಂದು ಮಧ್ಯಾಹ್ನ 2:30ರ ಸುಮಾರಿಗೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ.
ಮೃತನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕಿರಣ್ (23) ಎಂದು ಗುರುತಿಸಲಾಗಿದೆ. ರಕ್ಷಿಸಲ್ಪಟ್ಟ ಹೊಸನಗರದ ಅಭಿಷೇಕ್(22) ಎಂಬಾತ ತೀವ್ರವಾಗಿ ಅಸ್ವಸ್ಥಗೊಂಡು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ನಡೆಯುತ್ತಿದ್ದ ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಇಂದು ನಡೆದ ಮಾರ್ಕೆಟಿಂಗ್ ತರಬೇತಿಯನ್ನು ಮುಗಿಸಿ ಮಧ್ಯಾಹ್ನ ವಿಹಾರಕ್ಕೆಂದು ಮಲ್ಪೆ ಬೀಚ್‌ಗೆ ಆಗಮಿಸಿದ್ದರು. ಇವರೊಂದಿಗೆ ಗುರುಪ್ರಸಾದ್ ಹಾಗೂ ವಿವೇಕ್ ಎಂಬವರು ಕೂಡ ಇದ್ದರು.
ಆದರೆ ಬೀಚ್‌ನಲ್ಲಿ ಈಜು ಬಾರದ ಕಿರಣ್ ಹಾಗೂ ಅಭಿಷೇಕ್ ನೀರಿಗೆ ಇಳಿದು ಆಡುತ್ತಿದ್ದರು. ಆಗ ಅಬ್ಬರದ ಅಲೆಗೆ ಸಿಲುಕಿದ ಅವರಿಬ್ಬರು ನೀರು ಪಾಲಾದರು. ಕೂಡಲೇ ತೀರದಲ್ಲಿದ್ದ ಕೋಸ್ಟ್‌ಗಾರ್ಡ್ ತಂಡದವರು ನೀರಿಗೆ ಹಾರಿ ಅಭಿಷೇಕ್‌ನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಕಿರಣ್‌ನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ನೀರು ಪಾಲಾದ ಕಿರಣ್‌ನ ಮೃತದೇಹವು ಅಪರಾಹ್ನ 3:30ರ ಸುಮಾರಿಗೆ ಅದೇ ಸ್ಥಳದಲ್ಲಿ ಪತ್ತೆಯಾಯಿತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







