ರಾಜ್ಯಕ್ಕೆ ಬೆಂಕಿ ಹಚ್ಚಲು 'ಮಂಗಳೂರು ಚಲೋ': ಎ.ಕೆ.ಸುಬ್ಬಯ್ಯ

ಬೆಂಗಳೂರು, ಸೆ.12: ರಾಜ್ಯಕ್ಕೆ ಬೆಂಕಿ ಹಚ್ಚಲು ಬಿಜೆಪಿಯವರು ‘ಮಂಗಳೂರು ಚಲೋ’ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಆ ಬೆಂಕಿಯನ್ನು ಹಂಚಿ, ಮೈ ಚಳಿ ಕಾಯಿಸುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಹಿರಿಯ ನ್ಯಾಯವಾದಿ ಎ.ಕೆ.ಸುಬ್ಬಯ್ಯ ಕಿಡಿಗಾರಿದ್ದಾರೆ.
ಮಂಗಳವಾರ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಪ್ರತಿರೋಧ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೆಸೆಸ್ಸ್ ಕಾರ್ಯಕರ್ತರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೂ, ಬಿಜೆಪಿಯವರು ಮಂಗಳೂರು ಚಲೋ ಮಾಡುತ್ತಾರೆ. ಹತ್ಯೆ ಯಾರೆ ಮಾಡಿರಲಿ ಅದು ಸರಿಯಲ್ಲ. ಹತ್ಯೆಗಳನ್ನು ನಿಲ್ಲಿಸುವುದು ಆರೆಸೆಸ್ಸ್‌ನವರ ಕೈಯಲ್ಲೆ ಇದೆ. ಅವರು ಬೇರೆಯವರ ಹತ್ಯೆ ಮಾಡುವುದನ್ನು ಬಿಟ್ಟರೆ, ಪ್ರತಿಹತ್ಯೆಗಳು ನಿಲ್ಲುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಮಂಗಳೂರಿನಲ್ಲಿ ಆರೆಸೆಸ್ಸ್ ಕಾರ್ಯಕರ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇತರರ ಹತ್ಯೆಯಾಗಿದೆ. ರಾಜ್ಯದ ಪೊಲೀಸ್ ಠಾಣೆಗಳಲ್ಲಿ ದೂರು ಪಡೆಯಲು ಪೊಲೀಸರು ಇಲ್ಲದೆ ಇರುವ ಸಂದರ್ಭದಲ್ಲಿ ಗೌರಿ ಲಂಕೇಶ್ ಹತ್ಯೆ ಆಗಿದೆ ಎಂದು ಎ.ಕೆ.ಸುಬ್ಬಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದರು, ಅಧಿಕಾರ ಹಿಡಿಯಬೇಕಾದರೆ ಬೆಂಕಿ ಹಚ್ಚಿ ಎಂದು ಹೇಳಿ ಹೋದರು. ಅಮಿತ್‌ಶಾ ಹೋದ ನಂತರ ಇಲ್ಲಿ ಬೆಂಕಿ ಹಚ್ಚುವ ಕೆಲಸ ಆರಂಭವಾಗಿದೆ ಎಂದು ಸುಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಚಿದಾನಂದ ರಾಜಘಟ್ಟ ಉಪಸ್ಥಿತಿ: ಗೌರಿ ಅವರ ಮಾಜಿ ಪತಿ ಚಿದಾನಂದ ರಾಜಘಟ್ಟ ಹಾಗೂ ಅವರ ಪತ್ನಿ ಮೇರಿ ಬ್ರೀಡಿಂಗ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಮೆರಿಕದಿಂದ ಆಗಮಿಸಿದ್ದರು. ಆದರೆ, ಹೆಚ್ಚಿನ ಜನರಿಗೆ ಅವರ ಆಗಮನದ ಮಾಹಿತಿಯೆ ಇರಲಿಲ್ಲ. ಸಾರ್ವಜನಿಕರ ಜೊತೆಗೆ ಕುಳಿತು ಅವರು ಸಮಾವೇಶವನ್ನು ಕಣ್ತುಂಬಿಕೊಂಡರು.
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಗಣ್ಯರು: ಸ್ವರಾಜ್ ಅಭಿಯಾನದ ಅಧ್ಯಕ್ಷ ಪ್ರಶಾಂತ್‌ಭೂಷಣ್, ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್, ಸಹೋದರಿ ಕವಿತಾ ಲಂಕೇಶ್, ಕೋಮುಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ರಾಜ್ಯ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ವಕೀಲ ಅನಂತ್‌ನಾಯಕ್, ವಿಚಾರವಾದಿ ಇರ್ಫಾನ್ ಅಲಿ ಇಂಜಿನಿಯರ್, ಎಐಎಂಎಸ್‌ಎಸ್ ಹೋರಾಟಗಾರ್ತಿ ಕವಿತಾ ಕೃಷ್ಣನ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಉದಯಪ್ರಕಾಶ್, ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಸಾಹಿತಿ ರಂಜಾನ್ ದರ್ಗಾ, ನಟ ಚೇತನ್ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.







