"ಕರ್ನಾಟಕ ಗೋ ವಧೆ ಪ್ರತಿಬಂಧಕ ಕಾಯಿದೆ ಜಾರಿಗೊಳಿಸುತ್ತೀರಾ":ಸ್ಪಷ್ಟ ನಿಲುವು ತಿಳಿಸಲು ಸರಕಾರಕ್ಕೆ ಹೈಕೋರ್ಟ್ ತಾಕೀತು

ಬೆಂಗಳೂರು, ಸೆ.12: ಕರ್ನಾಟಕ ಗೋ ವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೋಳಿಸುತ್ತೀರಾ ಅಥವಾ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟ ನಿಲುವು ತಿಳಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ. ಅಲ್ಲದೆ, ಅರ್ಜಿ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿದೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬಲಿಕೊಡುವ ಉದ್ದೇಶದಿಂದ ಶಿವಾಜಿನಗರದ ಸುತ್ತಮುತ್ತಲಿನ ಕಸಾಯಿಖಾನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಜಾನುವಾರುಗಳನ್ನು ರಕ್ಷಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ‘ಗೋ ಗ್ಯಾನ್’ ಎಂಬ ಸರಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.
ಅರ್ಜಿ ವಿಚಾರಣೆ ವೇಳೆ ಸರಕಾರಿ ಅಭಿಯೋಜಕ ರಾಚಯ್ಯ ವಾದಿಸಿ, ಗೋ ಹತ್ಯೆ ತಡೆ ಕಾಯ್ದೆಯ ನಿಯಮಗಳ ಕುರಿತು ಅರ್ಜಿದಾರರು ಸಲ್ಲಿಸಿರುವ ಸಲಹೆಗಳನ್ನು ನಾವು ಬೆಂಬಲಿಸುತ್ತೇವೆ. ಆದರೆ, ಈ ಅರ್ಜಿಯ ಕುರಿತು ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿಯನ್ನು ಈ ನ್ಯಾಯಪೀಠ ಹೊಂದಿಲ್ಲ. ಇದೊಂದು ಸೂಕ್ಷ್ಮ ಪ್ರಕರಣವಾಗಿದೆ. ಅಡ್ವೋಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.
ಇದನ್ನು ಆಕ್ಷೇಪಿಸಿದ ನ್ಯಾಯಮೂರ್ತಿಗಳು, ಕರ್ನಾಟಕ ಗೋ ವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತೀರಾ ಅಥವಾ ಇಲ್ಲವೇ ಎಂಬುದರ ಬಗ್ಗೆ ರಾಜ್ಯ ಸರಕಾರ ಮೊದಲು ಸ್ಪಷ್ಟಪಡಿಸಬೇಕು. ಇನ್ನು ಈ ನ್ಯಾಯಾಲಯವೇ ಶಿವಾಜಿನಗರದ ದೊಡ್ಡಿಗಳ ಪರಿಶೀಲನೆಗಾಗಿ ಕೊರ್ಟ್ ಕಮೀಷನರ್‌ಗಳನ್ನು ನೇಮಿಸಿತ್ತು. ಅವರು ಭೇಟಿ ನೀಡಿದಾಗ ಸ್ಥಳದಲ್ಲಿ ಕಂಡ ಜಾನುವಾರಗಳನ್ನು ಏಕೆ ಸ್ಥಳಾಂತರಿಸಲಿಲ್ಲ. ಅರ್ಜಿದಾರರು ಪದೇ ಪದೇ ಮನವಿ ಮಾಡಿದರೂ ಪೊಲೀಸರು ಏಕೆ ಯಾವುದೇ ಕ್ರಮ ಜುರುಗಿಸಲಿಲ್ಲ ಎಂದು ಪ್ರಶ್ನಿಸಿದರು.
ಅಲ್ಲದೆ, ಸುಪ್ರೀಂ ಕೋರ್ಟ್ ಸೂಚನೆಯಂತೆ ಗೋ ರಕ್ಷಣೆಯ ಹೆಸರಿನಲ್ಲಿ ಜನರು ಹಿಂಸೆ ಕೃತ್ಯಗಳನ್ನು ನಡೆಸುವುದನ್ನು ತಡೆಯಲು ಜಿಲ್ಲಾ ಮಟ್ಟದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮೇಲ್ವಿಚಾರಣಾ (ನೋಡಲ್) ಅಧಿಕಾರಿಗಳನ್ನಾಗಿ ನೇಮಿಸುವ ಹಾಗೂ ಗೋಹತ್ಯೆ ಪ್ರತಿಬಂಧಕ ಸಮಿತಿ ರಚನೆ ವಿಚಾರದಲ್ಲಿ ಸರಕಾರ ಯಾವ ಕ್ರಮ ಜುರುಗಿಸಿದೆ ಎಂದು ಮೌಖಿಕವಾಗಿ ಕೇಳಿದರು.







