ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯಾಗಾರ

ದಾವಣಗೆರೆ,ಸೆ.12: ಮುಂದಿನ ಆರ್ಥಿಕ ವರ್ಷದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಉದ್ಯೋಗ ಖಾತ್ರಿ ಯೋಜನೆಯಡಿ ಶೇ. 70 ರಷ್ಟು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ತಯಾರಿಸಿ, ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಇಂತಹ ಕಾರ್ಯಾಗಾರ ಅತ್ಯಂತ ಉಪಯುಕ್ತವಾಗಿದೆ ಎಂದು ಜಿ.ಪಂ ಉಪಕಾರ್ಯದರ್ಶಿ ಜಿ.ಎಸ್. ಷಡಾಕ್ಷರಪ್ಪ ಹೇಳಿದರು.
ಕೇಂದ್ರೀಯ ಅಂತರ್ಜಲ ಮಂಡಳಿ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಮಂತ್ರಾಲಯ, ಭಾರತ ಸರ್ಕಾರ, ಬೆಂಗಳೂರು ಇವರು ರಾಜೀವ್‍ಗಾಂಧಿ ರಾಷ್ಟ್ರೀಯ ತರಬೇತಿ ಹಾಗೂ ಸಂಶೋಧನಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಬಾಪೂಜಿ ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಭಾಂಗಣದಲ್ಲಿ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತು ಸೆ. 12 ರಿಂದ 14 ರ ವರೆಗೆ ಹಮ್ಮಿಕೊಳ್ಳಲಾಗಿರುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಂತಹ ತರಬೇತಿ ಕಾರ್ಯಾಗಾರಗಳು ಜಲಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳು, ಪಂಚಾಯತ್ ರಾಜ್ ಸಂಸ್ಥೆ, ಸರ್ಕಾರೇತರ ಸಂಸ್ಥೆಗಳಿಗೆ ಅತ್ಯಂತ ಅವಶ್ಯಕವಾಗಿದೆ. ಅಂತರ್ಜಲ ಸಮರ್ಪಕ ನಿರ್ವಹಣೆ ಮತ್ತು ಅಭಿವೃದ್ಧಿಗೆ ಪೂರಕವಾಗುವಂತೆ ಮುಂದಿನ ಕ್ರಿಯಾ ಯೋಜನೆ ತಯಾರಿಸುವ ನಿಟ್ಟಿನಲ್ಲಿ ಶಿಬಿರಾರ್ಥಿಗಳು ತರಬೇತಿ ಹೊಂದಿ, ತಮ್ಮ ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವಂತೆ ಹಾಗೂ ನೀರಿನ ನಿರ್ವಹಣೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯನ್ನು ರವಾನಿಸಬೇಕೆಂದು ಕರೆ ನೀಡಿದರು.
ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಬೇಂದ್ರಪ್ಪ ಮಾತನಾಡಿ, ಕೆರೆಗಳ ನಿರ್ವಹಣೆ ಆದರೆ ಅಂತರ್ಜಲ ನಿರ್ವಹಣೆ ತಾನಾಗೇ ಆಗುತ್ತದೆ. ಕೆರೆ ಹೂಳೆತ್ತುವುದು ಮೊದಲ ಆದ್ಯತೆ ಆಗಬೇಕು. ಕೆರೆಗಳು ಮತ್ತು ಅಂತರ್ಜಲಕ್ಕೆ ನೇರ ಸಂಬಂಧವಿದೆ. ಯಾವುದೇ ಯೋಜನೆ ಮಾಡುವ ಮೊದಲು ಅಂಕಿಅಂಶಗಳನ್ನು ಸಂಗ್ರಹಿಸಬೇಕು. ಅಂಕಿ ಅಂಶ ಆಧಾರದಲ್ಲಿ ಕೈಗೊಂಡ ಕೆಲಸಗಳು ಯಶಸ್ಸು ಕಾಣುತ್ತವೆ. ಜಿಲ್ಲೆಯಲ್ಲಿ ಏಪ್ರಿಲ್‍ನಿಂದ ಅಕ್ಟೋಬರ್‍ವರೆಗೆ ಸರಾಸರಿ 500 ರಿಂದ 1000 ಮಿಮೀ ಮಳೆಯಾಗುತ್ತಿದೆ. ಮಳೆ ಬೀಳುವ ಪ್ರಮಾಣದಲ್ಲಿ ಅಂತಹ ವ್ಯತ್ಯಾಸ ಆಗಿಲ್ಲ. ಆದರೆ ಬಳಕೆ ಪ್ರಮಾಣ ಹೆಚ್ಚಾಗಿದೆ.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿಯಾದ ನೀರಿನ ಬಳಕೆಗೆ ಮೀಟರ್ ಅಳವಡಿಸದಿರುವುದು ನೀರಿನ ತತ್ವಾರಕ್ಕೆ ಒಂದು ಕಾರಣ. ಮುಂದುವರೆದ ರಾಷ್ಟ್ರಗಳಲ್ಲಿ ನೀರಿನ ಬಳಕೆಯ ಕುರಿತು ಮೀಟರ್ ಅಳವಡಿಸಲಾಗಿದ್ದು ಅದನ್ನು ಪರಿವೀಕ್ಷಿಸಲಾಗುತ್ತದೆ. ಇಲ್ಲಿಯೂ ಇಂತಹ ನೀರನ್ನು ಮಿತವಾಗಿ ಸದ್ಬಳಕೆ ಮಾಡುವಂತಹ ಆಲೋಚನೆಗಳು ಹುಟ್ಟಿ ಜಾರಿಯಾಗಬೇಕು. ಬಾವಿಗಳು, ಕೆರೆಗಳು, ಟನಲ್‍ಗಳೂ ಕೂಡ ಅಂತರ್ಜಲಕ್ಕೆ ಉತ್ತಮ ಮೂಲವಾಗಿದ್ದು ನಮ್ಮ ವ್ಯವಸ್ಥೆಯಲ್ಲಿ ನೀರನ್ನು ಸಮರ್ಪಕವಾಗಿ ನಿರ್ವಹಿಸುವಂತಹ ನಿಯಮಗಳಾಗಬೇಕು. ಬೋರ್ ನೀರಲ್ಲಿ ಬತ್ತ ಬೆಳೆಯುವುದು ಸೂಕ್ತವಲ್ಲ. ನೀರಿನ ಮೂಲ ಕಡಿಮೆ ಇರುವೆಡೆ ಭತ್ತ ಮತ್ತು ಕಬ್ಬು ಬೆಳೆಯುವ ಹೊರತು ಕಡಿಮೆ ನೀರುಣಿಸುವ ಪರ್ಯಾಯ ಬೆಳೆಗಳನ್ನು ಬೆಳೆಯುವಂತಾಗಬೇಕು.
ಬಿಐಇಟಿ ಕಾಲೇಜಿನ ಡಾ. ಎಸ್ ಸುಬ್ರಹ್ಮಣ್ಯ ಸ್ವಾಮಿ ಮಾತನಾಡಿ, ನೀರನ್ನು ಸಮರ್ಪಕವಾಗಿ ನಿರ್ವಹಿಸದೇ ಹೋದಲ್ಲಿ ಮುಂದಿನ ಪೀಳಿಗೆಗಳು ಕ್ಯಾಪ್ಸೂಲ್‍ನಲ್ಲಿ ನೀರನ್ನು ಕಾಣಬೇಕಾದೀತು. ಇಂದಿನ ನಮ್ಮ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ನೀರನ್ನು ನಾವು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲವೆಂಬುದಕ್ಕೆ ನಿದರ್ಶನವಾಗಿದೆ. ನೀರನ್ನು ದುರ್ಬಳಕೆ ಮಾಡುತ್ತಿದ್ದೇವೆ ಎಂದರು.
ಕೆಂದ್ರೀಯ ಅಂತರ್ಜಲ ಮಂಡಳಿ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಮಂತ್ರಾಲಯದ ಕ್ಷೇತ್ರೀಯ ನಿರ್ದೇಶಕರಾದ ಕೆ.ಎಂ. ವಿಶ್ವನಾಥ ಮಾತನಾಡಿ, ಜೀವಜಲವಾಗಿರುವ ನೀರು ನಮ್ಮ ಭೂಭಾಗದಲ್ಲಿ ಮುಕ್ಕಾಲು ಭಾಗವಿದ್ದರೂ ಜಲಚಕ್ರದ ಮೂಲಕ ಶೇ. 1 ರಷ್ಟು ಸಿಹಿನೀರು ಮಾತ್ರ ಲಭ್ಯವಿದೆ. ಅಂಕಿಅಂಶಗಳ ಪ್ರಕಾರ ಕೃಷಿ, ಕೈಗಾರಿಕೆ ಮತ್ತು ಕುಡಿಯುವ-ಮನೆಬಳಕೆಗೆ ಅತಿ ಹೆಚ್ಚು ನೀರು ಪೂರೈಕೆಯಾಗುತ್ತಿದೆ. ಇದರಲ್ಲಿ ಶೇ. 50 ರಷ್ಟು ಕೃಷಿ ಅಂತರ್ಜಲದ ಮೇಲೆ ಅವಲಂಬಿತವಾಗಿದೆ. ಬಹುತೇಕ ಮನೆಬಳಕೆ ನೀರಿನ ಮೂಲ ಅಂತರ್ಜಲವಾಗಿದೆ.
ಬೆಂಗಳೂರಿನ ಸಿಜಿಡಬ್ಲು, ಎಸ್‍ಡಬ್ಲ್ಯುಆರ್‍ನ ವಿಜ್ಞಾನಿ ಡಾ. ಕೆ ಆರ್ ಸೂರ್ಯನಾರಾಯಣ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ತರಬೇತಿ ಕುರಿತ ಮಾಹಿತಿ ಹೊಂದಿರುವ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ವಿಜ್ಞಾನಿ ಬಿಜಿಮೊಲ್ ಜೋಸ್ ಸ್ವಾಗತಿಸಿದರು. ವಿಜ್ಞಾನಿ ಡಾ. ಎಸ್ ಎಸ್ ವಿಠ್ಠಲ ವಂದಿಸಿದರು. ಕೃಷಿ ಜಂಟಿ ನಿರ್ದೇಶಕ ಸದಾಶಿವ ಹಾಜರಿದ್ದರು.







