ಮೂರ್ಛೆ ತಪ್ಪಿದ ಪ್ರಯಾಣಿಕರು
ಮದೀನಾದಿಂದ ಕರಾಚಿಗೆ ಬಂದ ವಿಮಾನದ ವಾತಾನುಕೂಲಿ ವ್ಯವಸ್ಥೆ ಹಾಳು

ಕರಾಚಿ, ಸೆ. 12: ಸೌದಿ ಅರೇಬಿಯದಿಂದ ಕರಾಚಿಗೆ ತೆರಳುತ್ತಿದ್ದ ವಿಮಾನವೊಂದರ ವಾತಾನುಕೂಲಿ ವ್ಯವಸ್ಥೆಯ ವೈಫಲ್ಯದಿಂದಾಗಿ ಹಲವಾರು ಪ್ರಯಾಣಿಕರು ಪ್ರಜ್ಞಾಹೀನರಾಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಮಂಗಳವಾರ ತಿಳಿಸಿದೆ
ಇದರಿಂದಾಗಿ ವಿಮಾನವು ಮೂರು ಗಂಟೆಗೂ ಅಧಿಕ ಕಾಲ ವಿಳಂಬಗೊಂಡಿತು.
ವಿಮಾನದೊಳಗಿದ್ದ ಹೆಚ್ಚಿನ ಪ್ರಯಾಣಿಕರು ಉಸಿರುಗಟ್ಟಿ ಪ್ರಜ್ಞಾಹೀನಗೊಂಡರು ಹಾಗೂ ಈ ಸಂದರ್ಭದಲ್ಲಿ ವಿಮಾನದ ಒಳಗಿನ ಉಷ್ಣತೆಯೂ ಹೆಚ್ಚಿತ್ತು ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ.
ಈ ಘಟನೆಯನ್ನು ಬಿಂಬಿಸುವ ವೀಡಿಯೊವೊಂದು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು.
ಮದೀನಾದಿಂದ ಹಜ್ ಯಾತ್ರಿಗಳನ್ನು ಹೊತ್ತ ಸೌದಿ ಅರೇಬಿಯನ್ ಏರ್‌ಲೈನ್ಸ್ ವಿಮಾನವು ಶನಿವಾರ ಮಧ್ಯಾಹ್ನ ಕರಾಚಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗಿತ್ತು. ಆದರೆ, ಅಜ್ಞಾತ ಕಾರಣಗಳಿಗಾಗಿ ಅದು ಸರಿಯಾದ ಸಮಯಕ್ಕೆ ತಲುಪಿಲ್ಲ.
ವಿಮಾನ ಹೊರಡುವುದಕ್ಕೆ ಮೊದಲೇ ಅದರ ವಾತಾನುಕೂಲಿ ವ್ಯವಸ್ಥೆಯು ಹಾಳಾಗಿರುವುದು ಪ್ರಯಾಣಿಕರ ಗಮನಕ್ಕೆ ಬಂದಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ವಿಮಾನ ಹಾರಾಟ ನಡೆಸುವ ಮೊದಲು ಅದನ್ನು ಸರಿಪಡಿಸಲಾಗುತ್ತದೆ ಎಂಬುದಾಗಿ ಅವರಿಗೆ ವಿಮಾನ ಸಿಬ್ಬಂದಿ ಉತ್ತರಿಸಿದ್ದರು. ಆದರೆ, ಸಮಸ್ಯೆಯು ಇಡೀ ಪ್ರಯಾಣದುದ್ದಕ್ಕೂ ಹಾಗೇ ಇತ್ತು ಎಂದು ಪ್ರಯಾಣಿಕರು ದೂರಿದರು.







