ದಸರಾ ಉತ್ಸವ : ಮಡಿಕೇರಿಗೆ 30 ಲಕ್ಷ ರೂ., ಗೋಣಿಕೊಪ್ಪಕ್ಕೆ ರೂ.25 ಲಕ್ಷ ಬಿಡುಗಡೆ
ಮಡಿಕೇರಿ, ಸೆ.12 :ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಆಚರಣೆಗೆ 30 ಲಕ್ಷ ರೂ. ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ 25 ಲಕ್ಷ ರೂ. ಅನುದಾನವನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಪ್ರಸಕ್ತ ಸಾಲಿನ ದಸರಾ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ಮಡಿಕೇರಿ ದಸರಾ ಸಮಿತಿ ಮತ್ತು ಗೋಣಿಕೊಪ್ಪಲು ದಸರಾ ಸಮಿತಿಯ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಗತ್ಯ ಅನುದಾನಕ್ಕೆ ಮನವಿಯನ್ನು ಸಲ್ಲಿಸಿದ್ದರು.
ಮಡಿಕೇರಿ ದಸರಾ ಉತ್ಸವದ ಆಚರಣೆಗೆ ಮತ್ತು ರಾಜಾಸೀಟ್ ಉದ್ಯಾನವನ ಹಾಗೂ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನವನ್ನು ಒದಗಿಸುವಂತೆ ಉಸ್ತುವಾರಿ ಸಚಿವ ಸೀತಾರಾಮ್ ಅವರು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು 30 ಲಕ್ಷ ಅನುದಾನವನ್ನು ಒದಗಿಸುವಂತೆ ನಿರ್ದೇಶನವನ್ನು ಸಂಬಂಧಪಟ್ಟ ಇಲಾಖೆಗೆ ನೀಡಿದ್ದಾರೆ. ಕಳೆದ ಸಾಲಿನ ದಸರಾ ಉತ್ಸವಾಚರಣೆಗೆ 60 ಲಕ್ಷ ಅನುದಾನವನ್ನು ಒದಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಗೋಣಿಕೊಪ್ಪಲು ದಸರಾ ಉತ್ಸವಾಚರಣೆಗೆ ಸಂಬಂಧಿಸಿದಂತೆ ಈ ಬಾರಿ 25 ಲಕ್ಷ ಅನುದಾನವನ್ನು ಒದಗಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದು, ಕಳೆದ ಸಾಲಿನಲ್ಲಿಯೂ ಇಷ್ಟೇ ಅನುದಾನವನ್ನು ನೀಡಲಾಗಿತ್ತು.
ಪ್ರಸಕ್ತ ಸಾಲಿನ ಮಡಿಕೇರಿ ದಸರಾ ಉತ್ಸವಾಚರಣೆಗೆ 2 ಕೋಟಿಯ ಕ್ರಿಯಾ ಯೋಜನೆಯನ್ನು ದಸರಾ ಸಮಿತಿ ಸಿದ್ಧಪಡಿಸಿ, ಕಳೆದ ಸಾಲಿಗಿಂತಲೂ ಹೆಚ್ಚಿನ ಅನುದಾನದ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೆ, ಈ ಬಾರಿ ಅತ್ಯಲ್ಪ ಅನುದಾನದ ಭರವಸೆ ದೊರೆತ್ತಿರುವುದರಿಂದ ಸರ್ಕಾರದ ನಿರ್ಧಾರ ದಸರಾ ಆಚರಣೆಗೆ ಸಾಕಷ್ಟು ಹಿನ್ನಡೆಯನ್ನು ಉಂಟುಮಾಡುವ ಸಾಧ್ಯತೆಗಳಿದೆ.
ಮಡಿಕೇರಿ ದಸರಾ ಜನೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುವ ದಶಮಂಟಪಗಳಿಗೆ ತಲಾ 3 ಲಕ್ಷ ರೂ. ನೆರವನ್ನು ಕಳೆದ ಸಾಲಿನಲ್ಲಿ ದಸರಾ ಸಮಿತಿ ಲಭ್ಯ ಅನುದಾನದಲ್ಲಿ ನೀಡಿತ್ತು. ಆದರೆ, ಈ ಬಾರಿ ಅನುದಾನವೆ ಕಡಿಮೆಯಾಗಿರುವುದರಿಂದ ಮಂಟಪಗಳಿಗೆ ನೀಡುವ ನೆರವು ಅದೇ ಪ್ರಮಾಣದಲ್ಲಿ ಕಡಿಮೆ ಮಾಡಲೇಬೇಕಾದ ಅನಿವಾರ್ಯತೆ ದಸರಾ ಸಮಿತಿಯನ್ನು ಕಾಡಲಿದೆ.
ಇದರೊಂದಿಗೆ ನವರಾತ್ರಿ ಉತ್ಸವದ 9 ದಿನಗಳ ಕಾಲ ವರ್ಷಂಪ್ರತಿ ನಡೆಯುತ್ತಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಆದರೆ ಇನ್ನಷ್ಟು ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡುವ ಸಾಧ್ಯತೆಗಳಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಅನಿಲ್ ಹೆಚ್.ಟಿ. ವಿಶ್ವಾಸ ವ್ಯಕ್ತಪಡಿಸಿದ್ದಾರೆ.







