ವಂಶಪಾರಂಪರ್ಯ ರಾಜಕಾರಣ ಭಾರತದ ಹೆಚ್ಚಿನ ರಾಜಕೀಯ ಪಕ್ಷಗಳ ಸಮಸ್ಯೆ: ರಾಹುಲ್ ಗಾಂಧಿ

ಹೊಸದಿಲ್ಲಿ, ಸೆ. 12: ವಂಶ ಪಾರಂಪರ್ಯ ರಾಜಕಾರಣ ಭಾರತದ ಹೆಚ್ಚಿನ ರಾಜಕೀಯ ಪಕ್ಷಗಳ ಸಮಸ್ಯೆ. ಆದರೆ, ನಮ್ಮ ಪಕ್ಷದಲ್ಲಿರುವವರಿಗೆ ವಂಶಪಾರಂಪರ್ಯದ ಯಾವುದೇ ಹಿನ್ನೆಲೆ ಇಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ಸಂದರ್ಭ, ವ್ಯಕ್ತಿಯ ಹಿನ್ನೆಲೆ ಆತನ ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ ಎಂದು ಕೂಡ ಹೇಳಿದರು.
ಬರ್ಕಲಿಯಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನನ್ನಲ್ಲಿ ಕೇಳಿದರೆ ಪಕ್ಷ ನಿರ್ವಹಣೆಯ ಜವಾಬ್ದಾರಿ ಹೊರಲು ನಾನು ಸಿದ್ದ ಎಂದರು”. ವಂಶಪಾರಂಪರ್ಯ ರಾಜಕೀಯದ ಬಗ್ಗೆ ಕಾಂಗ್ರೆಸ್ ಒಲವು ಹೊಂದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಾರತ ವಂಶಪಾರಂಪರ್ಯ ಆಡಳಿತಕ್ಕೆ ಒಳಗಾಗಿದೆ ಎಂದರು.
ಭಾರತದ ಹೆಚ್ಚಿನ ಪಕ್ಷಗಳಲ್ಲಿ ಈ ಸಮಸ್ಯೆ ಇದೆ. ಅಖಿಲೇಶ್ ಯಾದವ್, ಸ್ಟಾಲಿನ್ (ಡಿಎಂಕೆಯ ಕರುಣಾನಿಧಿ ಅವರ ಪುತ್ರ) ವಂಶಪಾರಂಪರ್ಯವಾಗಿ ರಾಜಕೀಯಕ್ಕೆ ಬಂದವರು. ಅಭಿಷೇಕ್ ಬಚ್ಚನ್ ವಂಶಪಾರಂಪರ್ಯವಾಗಿ ನಟರಾದವರು. ವಂಶಪಾರಂಪರ್ಯದಿಂದಲೇ ಭಾರತ ನಡೆಯುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಆಡಳಿತದ ಹೆಚ್ಚಿನ ಕಾರ್ಯಕ್ರಮಗಳನ್ನು ಬಿಜೆಪಿಯವರು ಅನುಷ್ಠಾನಗೊಳಿಸಿದ್ದಾರೆ ಎಂದು ಹೇಳಿದ ಅವರು, ಯೋಜನೆಗಳ ಚಿಂತನೆಗಳನ್ನ ನಮ್ಮಿಂದಲೇ ಅವರು ಪಡೆದುಕೊಂಡಿದ್ದಾರೆ. ಆದರೆ, ಅದು ಕಾರ್ಯಗತವಾಗಿಲ್ಲ. ಯಾಕೆಂದರೆ ಅದು ಕಾರ್ಯನಿರ್ವಹಿಸಲಾರದು ಎಂಬುದು ನಮಗೆ ಗೊತ್ತಿತ್ತು ಎಂದರು.
ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ತಪ್ಪುಗಳು ನುಸುಳಿವೆ ಎಂದು ಎಲ್ಲರೂ ಬಲ್ಲರು ಎಂದು ಹೇಳಿದ ರಾಹುಲ್ ಗಾಂಧಿ, ವಿಭಿನ್ನ ನಿಲುವು ಹೊಂದಿರುವ ಪತ್ರಕರ್ತರನ್ನು ಹತ್ಯೆಗೈಯಲಾಗುತ್ತಿದೆ. ನನ್ನ ಅಜ್ಜಿ ಹಾಗೂ ಅಪ್ಪ ಹಿಂಸಾಚಾರಕ್ಕೆ ಬಲಿಯಾದರು. ಹಿಂಸಾಚಾರದಿಂದ ನ್ಯಾಯ ಸಿಗಲಾರದು ಎಂದರು.
ನಾವು ಆರೋಗ್ಯಕ್ಕೆ ಆದ್ಯತೆ ನೀಡಬೇಕಿದೆ ಎಂದು ಹೇಳಿದ ಅವರು, ಮೋದಿ ಅವರ ಸರಕಾರ ಜಿಎಸ್‌ಟಿ ಜಾರಿಗೆ ತಂದಿತು. ನೋಟು ನಿಷೇಧ ಮಾಡಿತು. ಆದರೆ ಇದು ಯಾವುದೂ ಯಶಸ್ವಿಯಾಗಿಲ್ಲ ಎಂದು ಹೇಳಿದರು.
ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚುತ್ತಿದೆ. ಉಗ್ರರ ಚಟುವಟಿಕೆಗಳು ತೀವ್ರಗೊಂಡಿದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಯುಪಿಎ ಸರಕಾರ 9 ವರ್ಷ ಕೆಲಸ ಮಾಡಿದೆ. ಆದರೆ, ಆ ಕೆಲಸವನ್ನು ಎನ್‌ಡಿಎ ಸರಕಾರ ಕೇವಲ 30 ದಿನಗಳಲ್ಲಿ ಹಾಳುಗೆಡವಿದೆ ಎಂದು ರಾಹುಲ್ ಗಾಂಧಿ ಹೇಳಿದರು.







