ತಮಿಳುನಾಡು ಶಾಸಕನಿಗಾಗಿ ಕೊಡಗಿನಲ್ಲಿ ಹುಡುಕಾಟ?
ಬರಿಗೈಯಲ್ಲಿ ಹಿಂದಿರುಗಿದ ತಮಿಳುನಾಡು ಪೊಲೀಸರು
ಮಡಿಕೇರಿ, ಸೆ.12: ಟಿ.ಟಿ.ವಿ. ದಿನಕರನ್ ಬಣಕ್ಕೆ ಸೇರಿದ 17 ಶಾಸಕರು ಕೆಲವು ದಿನಗಳಿಂದ ಕೊಡಗು ಜಿಲ್ಲೆಯ ಕುಶಾಲನಗರ, ಆನೆ ಕಾಡು ಸಮೀಪದಲ್ಲಿರುವ ಪ್ಯಾಡಿಗ್ಮಂಟನ್ ರೆಸಾರ್ಟ್ ನಲ್ಲಿ ರಹಸ್ಯವಾಗಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.
ಆದರೆ, ಈ ರೀತಿ ಆಶ್ರಯ ಪಡೆದಿದ್ದರೆನ್ನಲಾದ ಶಾಸಕರೋರ್ವರ ಕುಟುಂಬಸ್ಥರು ತಮಿಳುನಾಡಿನಲ್ಲಿ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಮನೆಯವರನ್ನು ಅಕ್ರಮವಾಗಿ ಕೂಡಿ ಹಾಕಲಾಗಿದೆ ಎಂದು ದೂರು ನೀಡಿದ್ದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ತಮಿಳುನಾಡು ಪೊಲೀಸರು, ಮಂಗಳವಾರ ಮಧ್ಯಾಹ್ನ ಪ್ಯಾಡ್ಮಿಂಗ್ಟನ್ ರೆಸಾರ್ಟ್‌ಗೆ ಧಾವಿಸಿ ಅಲ್ಲಿ ತಂಗಿದ್ದ ಶಾಸಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮಂಗಳವಾರ ಸಂಜೆ ಸುಂಟಿಕೊಪ್ಪಪೊಲೀಸ್ ಠಾಣೆಗೆ ಬಂದ ತಮಿಳುನಾಡು ಪೊಲೀಸರು ತಮ್ಮ ತಪಾಸಣೆ ಸಂಬಂಧಿತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ತಮಿಳುನಾಡಿನ ರಾಜಕೀಯ ಕ್ಷಿಪ್ರ ಚಟುವಟಿಕೆಗಳ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯ ಬಿರುಸು ಪಡೆದಿದ್ದು ಇದಕ್ಕಾಗಿ ತಮಿಳುನಾಡಿನ ದಿನಕರ್ ಬಣದ ಶಾಸಕರನ್ನು ದೂರದ ಕೊಡಗು ಜಿಲ್ಲೆಯ ರೆಸಾರ್ಟ್‌ಗೆ ಕರೆತರಲಾಗಿದೆ ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಬೇಕಾದವರ ಹುಡುಕಾಟ: ಮತ್ತೊಂದು ಬೆಳವಣಿಗೆಯಲ್ಲಿ ಪ್ರಕರಣವೊಂದರ ವಿಚಾರಣೆಗೆ ಅಗತ್ಯವಾಗಿದ್ದು, ತಲೆಮರೆಸಿಕೊಂಡಿರುವ ತಮಿಳುನಾಡಿನ ಶಾಸಕರೊಬ್ಬರ ಪತ್ತೆಗಾಗಿ ನೆರೆ ರಾಜ್ಯದ ಪೊಲೀಸರು ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆಯ ರೆಸಾರ್ಟ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ.
ತಮಿಳುನಾಡಿನ ರಾಜಕಾರಣದ ಹಿನ್ನೆಲೆಯಲ್ಲಿ ಟಿ.ಟಿ.ವಿ. ದಿನಕರನ್ ಬಣದ 17 ಶಾಸಕರೊಂದಿಗೆ ಪ್ರಕರಣವೊಂದರಲ್ಲಿ ಪೊಲಿಸರಿಗೆ ಬೇಕಾಗಿದ್ದ ಶಾಸಕ ಪಳನಿಯಪ್ಪನ್ ಇರಬಹುದೆನ್ನುವ ಸಂಶಯದಲ್ಲಿ ದಾಳಿ ನಡೆಸಿದ ತಮಿಳುನಾಡು ಪೊಲೀಸರು ಬರಿಗೈಯಲ್ಲಿ ಹಿಂದುರುಗಿದ್ದಾರೆ.
ತಮಿಳುನಾಡಿನ ತಿರುಚ್ಚಿಯ ಡಿವೈಎಸ್ಪಿ ರಾಘವನ್, ಚೆನ್ನೈನ ಡಿವೈಎಸ್ಪಿ ಸತ್ಯಮೂರ್ತಿ, ಕೊಯಂಬತ್ತೂರಿನ ಡಿವೈಎಸ್ಪಿ ವೇಲ್ ಮುರುಘನ್ ಸೇರಿದಂತೆ ನಾಲ್ವರು ಡಿವೈಎಸ್ಪಿಗಳ ನೇತೃತ್ವದ ಇಪ್ಪತ್ತು ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಮಂಗಳವಾರ ರೆಸಾರ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿರುವ ಶಾಸಕರನ್ನು ವಿಚಾರಣೆ ನಡೆಸಿ ಹಿಂದಿರುಗಿದ್ದಾರೆ.







