ಲಿಂಗಾಯತ-ವೀರಶೈವರಲ್ಲಿ ಭೇಧ ಭಾವವಿಲ್ಲ : ಈಶ್ವರ ಖಂಡ್ರೆ

ತುಮಕೂರು,ಸೆ.12:ವೀರಶೈವ ಲಿಂಗಾಯತರಲ್ಲಿ ಯಾವುದೇ ಭೇದ ಭಾವ ಇಲ್ಲ.ಎರಡೂ ಒಂದೇ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ತಿಳಿಸಿದ್ದಾರೆ ಎಂದು ಸಚಿವ ಈಶ್ವರ್‍ಖಂಡ್ರೆ ತಿಳಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳೊಂದಿಗೆ ಇಂದು ಸಿದ್ದಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರ ಸ್ವಾಮ್ಭಿಜಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವೀರಶೈವ ಲಿಂಗಾಯತರಲ್ಲಿ ಯಾವುದೇ ಭೇದ ಭಾವವಿಲ್ಲ.ನಾವೆಲ್ಲಾ ಒಟ್ಟಾಗಿ ಕುಳಿತುಕೊಂಡು ಮಾತನಾಡುತ್ತೇವೆ.ಸಚಿವರರಾದ ಎಂ.ಬಿ ಪಾಟೀಲ್ ಅವರನ್ನೂ ಗಣನೆಗೆ ತೆಗೆದುಕೊಂಡು ಮಾತನಾಡಿ,ಶೀಘ್ರ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.
ವೀರಶೈವ ಲಿಂಗಾಯತ ಇಬ್ಬರೂ ಒಂದೇ, ಮುಖ್ಯಮಂತ್ರಿಗಳು ನಮಗೆ ಸ್ವಂದಿಸಿದ್ದಾರೆ. ನೀವೆಲ್ಲರೂ ಒಗ್ಗೂಡಿ ಬಂದರೆ ನಿಮ್ಮ ಮನವಿಯನ್ನು ಪುರಸ್ಕರಿಸುತ್ತೇವೆ ಎಂದಿದ್ದಾರೆ.ಆದ್ದರಿಂದ ಎಲ್ಲರೂ ಒಟ್ಟಾಗಿ ಚರ್ಚಿಸಲಿದ್ದೇವೆ.ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ 125 ವರ್ಷಗಳ ಇತಿಹಾಸವಿದೆ. ಸಿದ್ದಗಂಗಾ ಶ್ರೀಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವಿದೆ.ವೀರಶೈವ ಲಿಂಗಾಯತ ಒಂದೇ ಎಂದು 2012 ರಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು,ಅದಿನ್ನೂ ಅಂತಿಮಗೊಂಡಿಲ್ಲ. ಅಖಿಲ ಭಾರತ ವೀರಶೈವ ಮಹಾಸಭಾದ ಉದ್ದೇಶ ಎಲ್ಲರನ್ನು ಒಂದು ಗೂಡಿಸುವುದು.ಸದ್ಯ ಈಗ ಭುಗಿಲೆದ್ದಿರುವ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಈ ಭೇಟಿಯಾಗಿದೆ ಎಂದು ಎಂದು ತಿಳಿಸಿದರು.
ಹಳ್ಳಿ ಭಾಗದಲ್ಲಿ ಲಿಂಗಾಯತ, ಪಟ್ಟಣ ಭಾಗದಲ್ಲಿ ವೀರಶೈವ ಎಂದು ಕರೆಯತ್ತಾರೆ. ಎರಡು ಸಮನಾಂತರ ಪದಗಳು, ಎರಡು ಒಂದೇ.ಸಮಾಜದಲ್ಲಿ ಭಿನ್ನ ವಾತಾವರಣ ಎದ್ದಿರುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲರನ್ನು ಚರ್ಚೆಗೆ ಕರೆಯಲಾಗಿದೆ. ವೀರಶೈವ ಮಹಾಸಭಾದ ಮುಖ್ಯಸ್ಥರಾದ ಶಾಮನೂರು ಶಿವಶಂಕರಪ್ಪನವರು ಚರ್ಚೆ ನೇತೃತ್ವ ವಹಿಸುತ್ತಾರೆ.ವೀರಶೈವ ಲಿಂಗಾಯತ ಎರಡು ಒಂದೇ ಎಂದು ಶ್ರೀಗಳು ಹೇಳಿದ್ದಾರೆ ಈಗಾಗಿ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾತನಾಡಿ, ಇಂದು ಶ್ರೀಗಳನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ.ಸಚಿವ ಎಂ.ಬಿ ಪಾಟೀಲ್ ಅವರ ಹೇಳಿಕೆಗೆ ಶ್ರೀಗಳೇ ಸ್ವಷ್ಟೀಕರಣ ನೀಡಿದ್ದಾರೆ.ಸಿದ್ದಗಂಗಾ ಶ್ರೀಗಳೇ ನಮಗೆ ಸುಪ್ರೀಂ ಇದ್ದಹಾಗೆ. ಅವರ ಹೇಳಿಕೆಯೇ ಅಂತಿಮ ಎಂದು ನುಡಿದರು.
ಈ ವೇಳೆ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್.ತಿಪ್ಪಣ್ಣ,ಎಂ.ಎಂ.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು







