'ಪ್ರತಿರೋಧದ ಕಹಳೆ'...!
ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪ್ರತಿರೋಧ ರ‍್ಯಾಲಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಜನಸಾಗರವೇ ಹರಿದು ಬಂದಿದೆ. ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸಾಮಾಜಿಕ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್, ಸ್ವಾಮಿ ಅಗ್ನಿವೇಶ್, ಪಿ.ಸಾಯಿನಾಥ್, ಜಿಗ್ನೇಶ್ ಮೆವಾನಿ, ಪ್ರಶಾಂತ್ ಭೂಷಣ್, ಕರ್ನಾಟಕದ ಪ್ರಮುಖ ಮಠಾಧೀಶರಾದ ನಿಡುಮಾಮಿಡಿಶ್ರೀ, ಡಾ.ಶಿವಮೂರ್ತಿ ಮುರುಘಾ ಶರಣರು, ಜಯಮೃತ್ಯುಂಜಯಶ್ರೀ ಹಾಗೂ ನಿಜಗುಣಾನಂದ ಶ್ರೀ, ಚಿಂತಕರಾದ ದೇವನೂರ ಮಹಾದೇವ, ಗಿರೀಶ್ ಕಾರ್ನಾಡ್ ಹಾಗೂ ಸಾಹಿತಿಗಳು, ಕಲಾವಿದರು, ಹೋರಾಟಗಾರರು, ಪ್ರಗತಿಪರರು, ವಿದ್ಯಾರ್ಥಿ ಸಮೂಹ ಪಾಲ್ಗೊಂಡಿದ್ದರು. ಜನಸ್ತೋಮದ ‘ನಾನು ಗೌರಿ ನಾವೆಲ್ಲ ಗೌರಿ’ ಘೋಷಣೆ ಉದ್ಯಾನನಗರಿಯಲ್ಲಿ ಮುಗಿಲು ಮುಟ್ಟಿತು. ದೇಶದಲ್ಲಿ ಉಲ್ಬಣಿಸುತ್ತಿರುವ ಅಸಹಿಷ್ಣುತೆ, ಕೋಮುವಾದ, ಫ್ಯಾಶಿಸಂ ವಿರುದ್ಧ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಗೌರಿಯ ಹತ್ಯೆಯ ಹಿಂದಿರುವ ಶಕ್ತಿಗಳಿಗೆ ಶಿಕ್ಷೆ ಆಗುವ ತನಕ ಹೋರಾಟ ನಿಲ್ಲದು ಎಂದು ಸಭೆ ಒಕ್ಕೊರಲಿನಿಂದ ಪಣತೊಟ್ಟಿತು.





